Uniform Civil Code: ಏಕರೂಪ ನಾಗರಿಕ ಸಂಹಿತೆಯ ಸಲಹೆಗಾಗಿ ನೀಡಲಾಗಿದ್ದ ಗಡುವನ್ನು ಲಾ ಕಮಿಷನ್ ವಿಸ್ತರಣೆ ಮಾಡಿದೆ. ಏಕರೂಪ ನಾಗರಿಕ ಸಂಹಿತೆ (ಯುಸಿಸಿ) (Uniform Civil Code) ಕುರಿತು ಸಾರ್ವಜನಿಕರ ಅಭಿಪ್ರಾಯ ಪಡೆಯಲು ಗಡುವು ನೀಡಲಾಗಿತ್ತು. ಶುಕ್ರವಾರ ಜುಲೈ 14 ರಂದು ಗಡುವು ನೀಡಲು ಕೊನೆಯ ದಿನವಾಗಿತ್ತು. ಇದೀಗ ಕಾನೂನು ಆಯೋಗವು ಈ ದಿನಾಂಕವನ್ನು ಜುಲೈ 28 ರವರೆಗೆ ವಿಸ್ತರಿಸಿದೆ.
ವಿವಿಧ ವಲಯಗಳ ವಿನಂತಿಯ ಮೇರೆಗೆ ಕಾನೂನು ಆಯೋಗವು
ಯುಸಿಸಿ ವಿಷಯದ ಬಗ್ಗೆ ಸಾರ್ವಜನಿಕರ ಪ್ರತಿಕ್ರಿಯೆ ಮತ್ತು ತಮ್ಮ ಕಾಮೆಂಟ್‌ಗಳನ್ನು ಸಲ್ಲಿಸಲು ಸಮಯವನ್ನು ವಿಸ್ತರಿಸಿದೆ. ಸಾರ್ವಜನಿಕರಿಗೆ ತಮ್ಮ ಅಭಿಪ್ರಾಯಗಳನ್ನು ನೀಡಲು ಜುಲೈ 28 ರವರೆಗೆ ಅವಕಾಶವಿದ್ದು, ನೀವು ಆಯೋಗದ ವೆಬ್‌ಸೈಟ್‌ನಲ್ಲಿ ಯುಸಿಸಿ ಕುರಿತು ಕಾಮೆಂಟ್‌ಗಳನ್ನು ಸಲ್ಲಿಸಬಹುದಾಗಿದೆ.
ಗುರುವಾರದವರೆಗೆ ಕಾನೂನು ಆಯೋಗವು ಆನ್‌ಲೈನ್ ಮಾಧ್ಯಮದ ಮೂಲಕ 50 ಲಕ್ಷಕ್ಕೂ ಹೆಚ್ಚು ಸಲಹೆಗಳನ್ನು ಸ್ವೀಕರಿಸಿದೆ. ಅಲ್ಲದೆ, ಹಾರ್ಡ್ ಕಾಪಿ ರೂಪದಲ್ಲಿಯೂ ಆಯೋಗಕ್ಕೆ ಹಲವು ಸಲಹೆಗಳು ಬಂದಿವೆ. ಜೂನ್ 14 ರಂದು, ಕಾನೂನು ಆಯೋಗವು ಸಾರ್ವಜನಿಕರು ಮತ್ತು ಮಾನ್ಯತೆ ಪಡೆದ ಧಾರ್ಮಿಕ ಸಂಸ್ಥೆಗಳು ಸೇರಿದಂತೆ ಮಧ್ಯಸ್ಥಗಾರರಿಂದ ಅಭಿಪ್ರಾಯಗಳನ್ನು ಪಡೆಯುವ ಮೂಲಕ UCC ಯಲ್ಲಿ ಹೊಸ ಸಮಾಲೋಚನಾ ಪ್ರಕ್ರಿಯೆಯನ್ನು ಆರಂಭಿಸಿತ್ತು.
ಅಲ್ಲದೆ, ಕೆಲವು ಸಂಘಟನೆಗಳು ಯುಸಿಸಿಯಲ್ಲಿ ವೈಯಕ್ತಿಕ ವಿಚಾರಣೆಗೆ ಒತ್ತಾಯಿಸಿ ಕಾನೂನು ಸಮಿತಿಯನ್ನು ಸಂಪರ್ಕಿಸಿವೆ. ಪ್ರತಿಕ್ರಿಯೆಗಳನ್ನು ಪರಿಶೀಲಿಸಿದ ನಂತರ ವೈಯಕ್ತಿಕ ವಿಚಾರಣೆಗೆ ಸಂಸ್ಥೆಗಳನ್ನು ಆಹ್ವಾನಿಸುವ ಬಗ್ಗೆ ನಿರ್ಧರಿಸಲಾಗುವುದು ಎಂದು ತಿಳಿದುಬಂದಿದೆ.
