ರಾಜ್ಯದಲ್ಲಿ ಆಡಳಿತಾರೂಢ ಕಾಂಗ್ರೆಸ್(Congress)ಗೆ ಬಹುಮತವಿಲ್ಲದ ವಿಧಾನ ಪರಿಷತ್ತಿನಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟವು ಎಪಿಎಂಸಿ (APMC) ಮಸೂದೆಯನ್ನು ತಡೆಯುವಲ್ಲಿ ಯಶಸ್ವಿಯಾಯಿತು.
ವಿಧಾನಸಭೆಯಲ್ಲಿ ಅಂಗೀಕೃತವಾದ ‘ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ) ತಿದ್ದುಪಡಿ ವಿಧೇಯಕ 2023’ ಅನ್ನು ಮೇಲ್ಮನೆಯಲ್ಲಿ ಪ್ರತಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಮತದಾನದ ಮೂಲಕ ಶಾಸನ ಪರಿಶೀಲನಾ ಸಮಿತಿಗೆ ಒಪ್ಪಿಸಲು ನಿರ್ಧರಿಸಲಾಯಿತು. ಕೆಳಮನೆಯಲ್ಲಿ ವಿಧೇಯಕ ಅಂಗೀಕಾರ ಪಡೆದುಕೊಂಡ ಖುಷಿಯಲ್ಲಿದ್ದ ರಾಜ್ಯ ಸರ್ಕಾರಕ್ಕೆ ಹಿನ್ನಡೆಯಾದಂತಾಗಿದೆ.
ಮಧ್ಯಾಹ್ನದ ವಿರಾಮದ ನಂತರ ವಿಧೇಯಕದ ಕುರಿತು ಸುಮಾರು 3 ಗಂಟೆಗಳ ಸುದೀರ್ಘ ಚರ್ಚೆ ನಡೆಯಿತು. ಆ ನಂತರ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಶಾಸನ ಪರಿಶೀಲನಾ ಸಮಿತಿಗೆ ವಹಿಸಲು ಪಟ್ಟು ಹಿಡಿದರು. ಆಗ ಸಭಾಪತಿ ಬಸವರಾಜ ಹೊರಟ್ಟಿ ಅವರು, ವಿಧೇಯಕವನ್ನು ಶಾಸನ ಪರಿಶೀಲನಾ ಸಮಿತಿಗೆ ಒಪ್ಪಿಸುವ ನಿಟ್ಟಿನಲ್ಲಿ ಮತದಾನ ಪ್ರಕ್ರಿಯೆ ಆರಂಭಿಸಿದರು
ಅಂದಹಾಗೆ 2020 ರಲ್ಲಿ, ಬಿಜೆಪಿ(BJP) ಸರ್ಕಾರವು ಎಪಿಎಂಸಿ ಕಾನೂನನ್ನು ತಿದ್ದುಪಡಿ ಮಾಡಿತ್ತು, ರೈತರು ಅಧಿಸೂಚಿತ ಮಾರುಕಟ್ಟೆಗಳು ಅಥವಾ ಯಾರ್ಡ್ಗಳಲ್ಲಿ ಮಾತ್ರ ವ್ಯಾಪಾರ ಮಾಡುವ ಬದಲು ಅವರು ಎಲ್ಲಿ ಬೇಕಾದರೂ ಮಾರಾಟ ಮಾಡಲು ಅನುವು ಮಾಡಿಕೊಟ್ಟಿತು. ಬಿಜೆಪಿ ಸರ್ಕಾರವು ದಂಡವನ್ನು ಸಹ ತೆಗೆದುಹಾಕಿತು, ಅದನ್ನು ಪುನಃ ಸ್ಥಾಪಿಸಲು ಮಸೂದೆಯು ಪ್ರಸ್ತಾಪಿಸಿದೆ. ಮೊನ್ನೆ ಮೊನ್ನೆ ತಾನೆ ವಿಧಾನಸಭೆಯಲ್ಲಿ (Vidhana sabhe) ಬಿಲ್ ಪಾಸ್ ಕೂಡ ಮಾಡಿತ್ತು. ಆದರೀಗ ವಿಧಾನ ಪರಿಷತ್ ನಲ್ಲಿ ಕಾಂಗ್ರೆಸ್ ಗೆ ಬಹುಮತವಿಲ್ಲದ ಕಾರಣ ಹಾಗೂ ಬಿಜೆಪಿ-ಜೆಡಿಎಸ್(BJP-JDS) ನ ಒಳ ಒಪ್ಪಂದದಿಂದ ಬಹುಮತ ಸಿಗದೆ ಬಿಲ್ ಪಾಪ್ ಗೆ ಒಪ್ಪಿಗೆ ಸಿಗಲಿಲ್ಲ. ಹೀಗಾಗಿ ಶಾಸನ ಪರಿಶೀಲನಾ ಸಮಿತಿಗೆ ಒಪ್ಪಿಸಲು ನಿರ್ಧರಿಸಲಾಗಿದೆ.
