Muharram Prediction: ಮುಸ್ಲಿಂ ಬಾಂಧವರ ಪ್ರಮುಖ ಹಬ್ಬಗಳಲ್ಲಿ ಒಂದಾದ ಮೊಹರಂ ನ್ನು ಜುಲೈ 29 ರಂದು ಶನಿವಾರದಂದು ಆಚರಿಸಲಾಗುತ್ತದೆ. 10 ದಿನಗಳ ಪವಿತ್ರ ಆಚರಣೆಯಾದ ಮೊಹರಂ ಜುಲೈ 19 ರಂದೇ ಆರಂಭವಾಗಿದ್ದು, ಜುಲೈ 29 ರಂದು ಮುಕ್ತಾಯಗೊಂಡಿದೆ. ಈ ಮೊಹರಂ ವೇಳೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಹೆಬ್ಬಳ್ಳಿ ಗ್ರಾಮದ ಲಾಲಸಾಬವಲಿ ದರ್ಗಾದಲ್ಲಿ ಲಾಲಸಾಬ್ ಅಜ್ಜ ಭವಿಷ್ಯ ನುಡಿಯುತ್ತಾರೆ. ಆದರೆ, ಈ ಬಾರಿ ನುಡಿದ ಭವಿಷ್ಯ (Muharram Prediction) ಜನರಲ್ಲಿ ಆತಂಕವನ್ನು ಸೃಷ್ಟಿ ಮಾಡಿದೆ.
ಪ್ರತಿ ವರ್ಷದಂತೆ ಈ ಬಾರಿಯೂ ಮೊಹರಂ ವೇಳೆ ಶನಿವಾರ ಸಂಜೆ ಲಾಲಸಾಬ್ ಅಜ್ಜ ಭವಿಷ್ಯ ನುಡಿದಿದ್ದಾರೆ. ಅವರು ನುಡಿಯುವ ಭವಿಷ್ಯ ಕೇಳಲು ಗ್ರಾಮಸ್ಥರು ಸ್ಥಳದಲ್ಲಿ ಸೇರಿದ್ದಾರೆ. ಲಾಲಸಾಬ್ ಅಜ್ಜ ದೇಶದಲ್ಲಿ ಮುಂದಾಗುವ ಘಟನೆಗಳ ಬಗ್ಗೆ ಹಾಗೂ ರಾಜಕೀಯದ ಬಗ್ಗೆ ಭವಿಷ್ಯ ನುಡಿದಿದ್ದಾರೆ.
ಅಚ್ಚರಿ ಏನೆಂದರೆ ಲಾಲಸಾಬ್ ಅಜ್ಜ ಕೇಸರಿ ವಸ್ತ್ರ ಹಿಡಿದು ಭವಿಷ್ಯ ನುಡಿದಿದ್ದಾರೆ. ಕೇಸರಿವಸ್ತ್ರ ಹಿಡಿದು ಇದರ ಸಲುವಾಗಿ ಬಹಳ ಬಡಿದಾಡುತ್ತಾರೆ. ಇದರ ಸಲುವಾಗಿ ಹೆಣಗಳು ಬೀಳುತ್ತವೆ. ಆದರೆ ಬರೆದು ಇಟ್ಟುಕೊಳ್ಳಿ, ಖುರ್ಚಿ ಮಾತ್ರ ಅದ ಗಟ್ಟಿ ಪಾ ಎಂದು ಕೇಸರಿ ವಸ್ತ್ರ ತೂರಿದ್ದಾರೆ. ಇದರರ್ಥ ಕೋಮು ಗಲಭೆಗಳು ನಡೆಯಲಿದ್ದು, ಸಾವು-ನೋವು ಸಂಭವಿಸಲಿವೆ. ಆದರೆ, ಕೇಂದ್ರದಲ್ಲಿ ಮತ್ತೆ ಬಿಜೆಪಿ ಅಧಿಕಾರ ಹಿಡಿಯುವುದು ಫಿಕ್ಸ್ ಎಂದು ಜನರು ವಿಶ್ಲೇಷಣೆ ಮಾಡಿದ್ದಾರೆ.ಸದ್ಯ ಲಾಲಸಾಬ್ ಅಜ್ಜ ನುಡಿದಿರುವ ಭವಿಷ್ಯದ ಹೇಳಿಕೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
