Bus Accident: ಸರ್ಕಾರಿ ಬಸ್ಸುಗಳು ಇತ್ತೀಚೆಗೆ, ಅಂದರೆ ಶಕ್ತಿ ಯೋಜನೆ ಜಾರಿ ಆದ ನಂತರ ಅಲ್ಲಲ್ಲಿ ಕೆಟ್ಟು ನಿಲ್ಲುವುದು, ಇನ್ನಿತರ ಸಮಸ್ಯೆಗಳು ಉಂಟಾಗುವುದು ಬೆಳಕಿಗೆ ಬರುತ್ತಿದೆ. ಇದಕ್ಕೆ ಉದಾಹರಣೆ ಎಂಬಂತೆ ಇಲ್ಲೊಂದು ಘಟನೆ ನಡೆದಿದೆ.
ಹೌದು, ಚಲಿಸುತ್ತಿರುವ ಬಸ್‌ನಿಂದ ಟೈಯರ್ ಕಳಚಿಕೊಂಡು ರಸ್ತೆ ಪಕ್ಕಕ್ಕೆ ಉರುಳಿ ಬಿದ್ದಿರುವ ಭಯಾನಕ ಘಟನೆ(Bus Accident), ಗದಗ ತಾಲೂಕಿನ ತಗಡೂರು ಹಾಗೂ ಹೊಂಬಳ ಗ್ರಾಮದ ನಡುವೆ ನಡೆದಿದೆ.
ಮೂಲತಃ ಗದಗ ಡಿಪೋಗೆ ಸೇರಿದ ವಾಯವ್ಯ ಕರ್ನಾಟಕ ಸಾರಿಗೆ ಬಸ್, ಗದಗದಿಂದ ನರಗುಂದದ ಕಡೆ ಹೊರಟಿತ್ತು. ಈ ವೇಳೆ ಇದ್ದಕ್ಕಿದ್ದಂತೆ ಬಸ್ನ ಹಿಂಬದಿಯ ಒಂದು ಚಕ್ರ ಕಳಚಿಕೊಂಡು ರಸ್ತೆ ಪಕ್ಕಕ್ಕೆ ಉರುಳಿಕೊಂಡು ಹೋಗಿ ಬಿದ್ದಿದೆ.
ಈ ಸಾರಿಗೆ ಬಸ್ ಸುಮಾರು 50 ಜನ ಪ್ರಯಾಣಿಕರನ್ನು ಕರೆದೊಯ್ಯುತ್ತಿತ್ತು. ಸದ್ಯ ಈ ಘಟನೆಯಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಬಸ್ನಲ್ಲಿದ್ದ ವಿದ್ಯಾರ್ಥಿಗಳು ಸೇರಿದಂತೆ ಪ್ರಯಾಣಿಕರು ಭಯಭೀತರಾಗಿದ್ದು, ಬಸ್ನ ಹಿಂಬದಿ ಚಕ್ರ ಕಳಚಿಕೊಂಡು ಉರುಳಿ ಹೋಗ್ತಿದ್ದಂತೆ ಚಾಲಕ ಬಸ್ ನಿಲ್ಲಿಸಿದ್ದಾನೆ. ಈ ಘಟನೆ ದೃಶ್ಯವನ್ನು ಬಸ್ನ ಹಿಂದೆ ಬರುತ್ತಿದ್ದ ಕಾರಿನಲ್ಲಿ ಇದ್ದವರು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ.
ಈ ಘಟನೆಯಿಂದ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂಬಂಧಪಟ್ಟವರ ನಿರ್ಲಕ್ಷದಿಂದಲೇ ಈ ರೀತಿ ಘಟನೆ ನಡೆಯುತ್ತಲೇ ಇದೆ. ಇದಕ್ಕೆ ಸರಿಯಾದ ವ್ಯವಸ್ಥೆ ಆಗಬೇಕು ಎಂದು ಆಗ್ರಹಿಸಿದ್ದಾರೆ.
