Crime News: ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನ ಬಿಸಿಲಹಳ್ಳಿ ಗ್ರಾಮದಲ್ಲಿ, ನಡೆದ ಅಸಹಜ ಸಾವು ಎಂದು ಬಿಂಬಿತ ಆಗಿರುವ, ಅಂದರೆ ಕಲುಷಿತ ಆಹಾರ ಸೇವಿಸಿ ಅಸ್ವಸ್ಥಗೊಂಡಿದ್ದ ದಂಪತಿ ಸಾವಿಗೀಡಾದ ಪ್ರಕರಣದಲ್ಲಿ, ತನಿಖೆ ವೇಳೆ ದಂಪತಿಯ ಸಾವಿನ ರಹಸ್ಯ ಬಯಲಾಗಿದೆ. ಪಾಪಿ ಪುತ್ರನೇ ಪೋಷಕರಿಗೆ ವಿಷ ಹಾಕಿ ಕೊಂದಿರುವ ಮಾಹಿತಿ (Crime News) ಬೆಳಕಿಗೆ ಬಂದಿದೆ.
ಆರೋಪಿ ಮಂಜುನಾಥ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ವೇಳೆ ಕೊಲೆ ಮಾಡಿರುವ ವಿಷಯ ಬಯಲಾಗಿದೆ. ಆಗಸ್ಟ್ 15ರಂದು ಮನೆಯಲ್ಲಿ ತಿಂಡಿ ಸೇವಿಸಿದ ಬಳಿಕ ಉಮಾ (48), ನಂಜುಂಡಪ್ಪ (55) ಅಸ್ವಸ್ಥಗೊಂಡಿದ್ದರು. ಚಿಕಿತ್ಸೆ ಪಡೆದು ಮನೆಗೆ ವಾಪಸ್ ಬರುವ ವೇಳೆ ಇಬ್ಬರೂ ದಿಢೀರ್ ಸಾವಿಗೀಡಾಗಿದ್ದರು.
ದಂಪತಿಗಳ ಹಠಾತ್ ಸಾವಿನ ಬಗ್ಗೆ ಕಿರಿಯ ಪುತ್ರ ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದರು. ಮಂಜುನಾಥ್, ವಿಧವೆಯೊಬ್ಬರ ಜೊತೆ ಅಕ್ರಮ ಸಂಬಂಧ ಹೊಂದಿದ್ದ. ಮಂಜುನಾಥ್ ತಾಯಿ ಉಮಾ ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದರು.
ಅಲ್ಲದೇ ಸಹಕಾರ ಸಂಘಗಳಲ್ಲಿ ತಾಯಿ ಉಮಾ ಮಾಡಿದ್ದ ಸಾಲದ ಹಣವನ್ನು ಮಂಜುನಾಥ್ ತನ್ನ ಸ್ವಾರ್ಥ ಕ್ಕಾಗಿ ದುರುಪಯೋಗ ಪಡಿಸಿಕೊಂಡಿದ್ದ. ಅಲ್ಲದೇ ಇನ್ನಷ್ಟು ಹಣ ನೀಡುವಂತೆ ಪದೇ ಪದೆ ತಾಯಿಯನ್ನು ಒತ್ತಾಯಿಸುತ್ತಿದ್ದ. ಆದರೆ ಒಂದು ಹಂತದ ನಂತರ ತಾಯಿ ಹಣ ನೀಡಲು ನಿರಾಕರಿಸಿದ್ದರು.ಅಕ್ರಮ ಸಂಬಂಧಕ್ಕೆ ವಿರೋಧ ಹಾಗೂ ಹಣ ಕೊಡದ ಸಿಟ್ಟಿನಿಂದ ಕೋಪಗೊಂಡು ತಾಯಿಯ ಹತ್ಯೆಗೆ ಮಂಜುನಾಥ್ ಪ್ಲಾನ್ ಹಾಕಿದ್ದ.
ಪ್ಲಾನ್ ಪ್ರಕಾರ ಮಂಜುನಾಥ ತಂದೆ, ತಾಯಿಗಿಂತ ಮೊದಲೇ ತಿಂಡಿ ತಿಂದು ಆನಂತರ ಪಲಾವ್‌ಗೆ ಕಳೆನಾಶಕ ಬೆರೆಸಿದ್ದ. ತಂದೆ, ತಾಯಿ ತಿಂಡಿ ತಿಂದ ವೇಳೆ ಔಷಧಿ ವಾಸನೆ ಬರುತ್ತಿದೆ ಎಂದು ವಾಂತಿ ಮಾಡಿದ ನಾಟಕವಾಡಿದ್ದ.
ಸದ್ಯ ಗುರುವಾರ ಅಂತ್ಯಕ್ರಿಯೆಗೆ ಸಿದ್ಧತೆ ಮಾಡಿಕೊಂಡಿದ್ದ ವೇಳೆ ಗ್ರಾಮಕ್ಕೆ ಆಗಮಿಸಿ ಪೊಲೀಸರು ಅಂತ್ಯಕ್ರಿಯೆ ತಡೆದು, ಕುಟುಂಬ ಸದಸ್ಯರ ಮನವೊಲಿಸಿ ಮೃತದೇಹಗಳ ಮರಣೋತ್ತರ ಪರೀಕ್ಷೆಗೆ ಕೊಂಡೊಯ್ದಿದ್ದರು. ನಂತರ ಅಸಹಜ ಸಾವು ಎಂದು ದೂರು ದಾಖಲಿಸಿಕೊಂಡು ತನಿಖೆ ನಡೆಸಿದ್ದರು. ಇದೀಗ ಪೋಷಕರನ್ನೇ ಕೊಲೆ ಮಾಡಿರುವ ಸತ್ಯವನ್ನು ಮಗ ಹೇಳಿದ್ದಾನೆ.
