Rozgar Mela: ಭಾರತವು ಈಗಾಗಲೇ ತನ್ನ ರಚನಾತ್ಮಕ ಸುಧಾರಣೆಗಳು, ಹೂಡಿಕೆಗಳು, ಆರ್ಥಿಕತೆಯ ಡಿಜಿಟಲೀಕರಣ, ಲಾಜಿಸ್ಟಿಕ್ಸ್ ಸುಧಾರಣೆಗಳು, ಕಾರ್ಮಿಕ ಕೌಶಲ್ಯ ಮತ್ತು ಉತ್ಪಾದನೆ, ರಫ್ತು, ಪ್ರವಾಸೋದ್ಯಮ, ಶಿಕ್ಷಣ ಮತ್ತು ಆರೋಗ್ಯದ ಮೇಲೆ ಕೇಂದ್ರೀಕರಿಸುವ ವಲಯ ನೀತಿಗಳಿಂದ ವಾಣಿಜ್ಯ ವಹಿವಾಟು ವಿಸ್ತರಣೆಗೆ ಈ ವಲಯಗಳು ಸೂಕ್ತವಾಗಿದ್ದು, ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವಾಗಿ ಪರಿವರ್ತಿಸುತ್ತಿದೆ.
ಅಂತೆಯೇ ದೇಶದ ಆರ್ಥಿಕತೆಯು ಪ್ರಗತಿಯ ಹಾದಿಯತ್ತ ಸಾಗಿದ್ದು 2030ರ ವೇಳೆಗೆ ಪ್ರವಾಸೋದ್ಯಮ, ಆಟೋಮೊಬೈಲ್, ಔಷಧ, ಆಹಾರ ಸಂಸ್ಕರಣೆ ಕ್ಷೇತ್ರದಲ್ಲಿ ಸಾಕಷ್ಟು ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ.
ಸದ್ಯ 8ನೇ ಆವೃತ್ತಿಯ ರೋಜ್‌ಗಾರ್ ಮೇಳವನ್ನು (Rozgar Mela) ಉದ್ದೇಶಿಸಿ 51 ಸಾವಿರ ಯುವಕರಿಗೆ, ದೇಶದ ನಾನಾ ಭಾಗಗಳಿಂದ ಅರೆಸೇನಾ ಪಡೆ, ನಾರ್ಕೊಟಿಕ್ಸ್ ಕಂಟ್ರೋಲ್ ಬ್ಯುರೊ, ದಿಲ್ಲಿ ಪೊಲೀಸ್ ಇಲಾಖೆಗಳಲ್ಲಿ ನೇಮಕವಾದವರಿಗೆ ಉದ್ಯೋಗ ನೇಮಕಾತಿ ಪತ್ರವನ್ನು ಉದ್ಯೋಗ ನೇಮಕಾತಿ ಪತ್ರವನ್ನು ಸಾಂಕೇತಿಕವಾಗಿ ವಿತರಿಸಿ ಮಾತನಾಡಿದ ಮೋದಿ ಅವರು, “ಪ್ರವಾಸೋದ್ಯಮ ವಲಯವೊಂದೇ 2030ರ ವೇಳಗೆ ದೇಶದ ಆರ್ಥಿಕತೆಗೆ 20 ಲಕ್ಷ ಕೋಟಿ ರೂ.ಗೂ ಹೆಚ್ಚಿನ ಆದಾಯ ನೀಡುವ ಸಾಧ್ಯತೆ ಇದೆ. ಈ ವಲಯದಲ್ಲಿ 13-14 ಕೋಟಿ ಹೊಸ ಉದ್ಯೋಗ ಅವಕಾಶಗಳು ಹುಟ್ಟಿಕೊಳ್ಳಲಿವೆ,” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ದೇಶ ಸೇವೆ ಮಾಡಲು ಯುವಕರು ತುದಿಗಾಲ ಮೇಲೆ ನಿಂತಿದ್ದು, ನೇಮಕಾತಿ ಪತ್ರ ಪಡೆದ ಎಲ್ಲರಿಗೂ ಶುಭವಾಗಲಿ. “ಈ ಅಮೃತ ಕಾಲದಲ್ಲಿ ನೇಮಕಾತಿ ಪತ್ರ ಪಡೆದವರು ‘ಅಮೃತ ರಕ್ಷಕ’,” ಎಂದು ಪ್ರಧಾನಿ ಮೋದಿ ಬಣ್ಣಿಸಿ ಹಾರೈಸಿದರು.
ಈ ದಶಕದ ಅಂತ್ಯದ ಹೊತ್ತಿಗೆ ಭಾರತವು ವಿಶ್ವದ ಮೂರು ಬಲಿಷ್ಠ ಆರ್ಥಿಕತೆ ಹೊಂದಿದ ರಾಷ್ಟ್ರಗಳಲ್ಲಿ ಒಂದೆನಿಸಿಕೊಳ್ಳಲಿದೆ. ಅಲ್ಲದೇ “ಮೇಡ್ ಇನ್ ಇಂಡಿಯಾ ಯೋಜನೆ ಅಡಿಯಲ್ಲಿ ಹೊಸ ಲ್ಯಾಪ್‌ಟಾಪ್ ಹಾಗೂ ಕಂಪ್ಯೂಟರ್‌ಗಳ ಉತ್ಪಾದನೆಯತ್ತ ಸರಕಾರ ಗಮನ ಕೇಂದ್ರಿಕರಿಸಿದೆ. ಇದರಿಂದ ಸ್ಥಳೀಯ ಮಟ್ಟದಲ್ಲಿ ಉತ್ಪಾದನೆ ಹೆಚ್ಚುವುದರ ಜತೆಗೆ, ಉದ್ಯೋಗ ಅವಕಾಶಗಳು ಸೃಷ್ಟಿಯಾಗಲಿವೆ,” ಎಂದು ಮೋದಿ ಭರವಸೆ ವ್ಯಕ್ತಪಡಿಸಿದರು .
ಇದನ್ನೂ ಓದಿ: ಕಲುಷಿತ ಆಹಾರ ಸೇವಿಸಿ ಮೃತಪಟ್ಟ ದಂಪತಿಯ ಸಾವಿನ ರಹಸ್ಯ ಬಯಲು ! ತಂದೆ ತಾಯಿ ಪಾಲಿಗೆ ಮಗನೇ ಯಮನಾದ
