ಸೌಜನ್ಯ ಹೋರಾಟ ರಾಜ್ಯದಾದ್ಯಂತ ತನ್ನ ಬಿಗುವು ಗಟ್ಟಿಗೊಳಿಸುತ್ತಿರುವ ಜೊತೆಗೆ ಇದೀಗ ಮತ್ತೊಮ್ಮೆ ಒಕ್ಕಲಿಗರ ಸುಪ್ರೀಂ ಸಮುದಾಯ ಸೌಜನ್ಯ ಕುಟುಂಬದ ಬೆನ್ನಿಗೆ ಭದ್ರವಾಗಿ ನಿಲ್ಲುವ ಮಾತನ್ನು ಪುನರುಚ್ಛರಿಸಿದೆ. ಇಂದು ಸೌಜನ್ಯ ಕುಟುಂಬ ಒಕ್ಕಲಿಗ ಸಮುದಾಯದ ಸ್ವಾಮೀಜಿ ಶ್ರೀ ಡಾ. ಧರ್ಮಪಾಲನಾಥ ಸ್ವಾಮೀಜಿಯವರನ್ನು ಅವರ ಮಂಗಳೂರಿನ ಕಾವೂರು ಮಠದಲ್ಲಿ ಭೇಟಿಯಾಗಿ ಆಶೀರ್ವಾದ ಪಡೆದುಕೊಂಡಿದೆ.
ರಾಜ್ಯದಲ್ಲಿ ಒಕ್ಕಲಿಗ ಸಮುದಾಯದ ಪ್ರಬಲ ಮಠವಾಗಿರುವ ಶ್ರೀ ಆದಿಚುಂಚನಗಿರಿ ಮಠ ಸೌಜನ್ಯ ಗೌಡ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದಲ್ಲಿ ತನ್ನ ಸಂಪೂರ್ಣ ಬೆಂಬಲವನ್ನು ನೀಡಿದೆ. ಇದರಿಂದ ಸಹಜವಾಗಿಯೇ ಸೌಜನ್ಯ ಹೋರಾಟಕ್ಕೆ ಭಾರಿ ಮಟ್ಟದ ಬಲ ಸಿಕ್ಕಂತಾಗಿದೆ. ಮೊನ್ನೆ ಭಾನುವಾರ ಬೆಳ್ತಂಗಡಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಒಕ್ಕಲಿಗರ ಮಂಗಳೂರು ಶಾಖಾಮಠದ ಡಾಕ್ಟರ್ ಶ್ರೀ ಧರ್ಮಪಾಲನಾಥ ಸ್ವಾಮೀಜಿಯವರು ಪಾಲ್ಗೊಂಡಿದ್ದರು. ಮತ್ತು ಅಪರಾಧಿಗಳ ಬಂಧನ ಮತ್ತು ಶಿಕ್ಷೆಗಾಗಿ ಆಗ್ರಹಿಸಿದ್ದರು. ಇದೀಗ ಭಾನುವಾರದ ಬೃಹತ್ ಪ್ರತಿಭಟನೆಯ ಬೆನ್ನಲ್ಲೇ ಎರಡನೇ ದಿನದಲ್ಲಿ ಮತ್ತೆ ಸೌಜನ್ಯ ತಾಯಿ ಕುಸುಮಾವತಿ ಮತ್ತು ಮಾವ ವಿಠಲ ಗೌಡ ಸಹಿತ ಇತರ ಕುಟುಂಬಸ್ಥರು ಒಕ್ಕಲಿಗ ಸ್ವಾಮೀಜಿ ಧರ್ಮಪಾಲನಾಥ ಸ್ವಾಮೀಜಿಯವರನ್ನು ಭೇಟಿಯಾಗಿರುವುದು ದೊಡ್ಡ ಮಟ್ಟದ ಹೋರಾಟಕ್ಕೆ ಹೊರಟ ಬಗೆಗಿನ ಸಣ್ಣ ಮುನ್ನುಡಿ ಎನ್ನಲಾಗುತ್ತಿದೆ.

ಸ್ವಾಮೀಜಿಯ ಜೊತೆ ಏನಾಗಿದೆ ಚರ್ಚೆ ?
ಇಂದು ಸೌಜನ್ಯ ಕುಟುಂಬ ಸ್ವಾಮೀಜಿಯವರ ಜೊತೆ ಮಾತನಾಡಿ ಹೋರಾಟದ ಮುಂದಿನ ನಡೆಯ ಬಗ್ಗೆ ಚರ್ಚೆ ನಡೆದಿದೆ. ಸೌಜನ್ಯಳಿಗೆ ನ್ಯಾಯ ಕೊಡುವ ದೃಷ್ಟಿಯಲ್ಲಿ ಆದಿಚುಂಚನಗಿರಿ ಮಠ ಯಾವತ್ತಿಗೂ ಬೆನ್ನಿಗೆ ಇದೆ ಎನ್ನುವುದನ್ನು ಸ್ವಾಮೀಜಿಯವರು ಮತ್ತೆ ಸ್ಪಷ್ಟಪಡಿಸಿದ್ದಾರೆ. ಅಲ್ಲದೆ ಈ ಕೇಸ್ನಲ್ಲಿ ಇರುವ ಇತರ ಸೂಕ್ಷ್ಮ ವಿಚಾರಗಳ ಬಗ್ಗೆಯೂ ಸೂಕ್ಷ್ಮವಾಗಿ ಚರ್ಚೆ ನಡೆಸಲಾಗಿದೆ. ಈ ಮೂಲಕ ಹೋರಾಟವು ಇನ್ನೊಂದು ಹಂತಕ್ಕೆ ಏರುವ ಎಲ್ಲಾ ಲಕ್ಷಣಗಳು ಗೋಚರಿಸಿದೆ.
