CM Siddaramaiah : ನನಗೆ ಒಮ್ಮೆ ದೇವಸ್ಥಾನಕ್ಕೆ ಬರುವಾಗ ಬಟ್ಟೆ ಬಿಚ್ಚಿ ಎಂದು ಹೇಳಿದ್ದರು, ನಾನು ದೇವಸ್ಥಾನ ಪ್ರವೇಶಿಸುವುದಿಲ್ಲ. ಬಟ್ಟೆ ಬಿಚ್ಚಿ ದೇವಸ್ಥಾನ ಪ್ರವೇಶಿಸುವುದು ದೇವರಿಗೆ ಮಾಡುವ ಅವಮಾನ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ(CM Siddaramaiah) ಹೇಳಿದ್ದಾರೆ.
ಹೌದು, ಸದ್ಯ ನಾಡಿನಾದ್ಯಂತ ಧರ್ಮದ ವಿಚಾರ ವಿವಾದ ಎಬ್ಬಿಸಿರುವ ಬೆನ್ನಲ್ಲೇ ದೇವಸ್ಥಾನಗಳ ಒಳಗೆ ಪ್ರವೇಶಿಸಲು ಬಟ್ಟೆ ಬಿಚ್ಚಬೇಕು ಎಂಬ ಸಂಪ್ರದಾಯದ ವಿರುದ್ಧ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ದೇವರ ದೃಷ್ಟಿಯಲ್ಲಿ ಎಲ್ಲರೂ ಸಮಾನರು. ಬಟ್ಟೆ ಬಿಚ್ಚುವ ಸಂಪ್ರದಾಯ ದೇವರಿಗೆ ಮಾಡುವ ಅವಮಾನ ಎಂದು ಸಿಎಂ ಅಭಿಪ್ರಾಯಪಟ್ಟಿದ್ದಾರೆ.
ಅಂದಹಾಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಗುರುವಾರ ಆಯೋಜಿಸಿದ್ದ ಬ್ರಹ್ಮಶ್ರೀ ನಾರಾಯಣಗುರು ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ‘ ನನಗೆ ಒಂದು ಸಲ ದೇವಸ್ಥಾನಕ್ಕೆ ಬಟ್ಟೆ ಬಿಚ್ಚಿ ಬನ್ನಿ ಎಂದು ಹೇಳಿದ್ರು, ಆದರೆ ನಾನು ಬಟ್ಟೆ ಬಿಚ್ಚಿ ದೇವಸ್ಥಾನ ಪ್ರವೇಶಿಸುವುದು ಅವಮಾನ ಎಂದು ದೇವಸ್ಥಾನದ ಒಳಗೆ ಹೋಗಿಲ್ಲ. ನಿಮಗೆ ಪ್ರವೇಶವಿಲ್ಲದ ದೇವಸ್ಥಾನಗಳಿಗೆ ಹೋಗಬೇಡಿ, ನೀವೇ ನಿಮ್ಮ ದೇವರುಗಳಿಗೆ ದೇವಾಲಯ ಕಟ್ಟಿ ಪೂಜೆ ಮಾಡಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಸಿಎಂ ಸಿದ್ದರಾಮಯ್ಯ ನೀಡಿರುವ ಈ ಹೇಳಿಕೆ ಮತ್ತೊಂದು ಹೊಸ ಚರ್ಚೆಗೆ ಕಾರಣವಾಗಿದೆ.
ಅಲ್ಲದೆ ನಾರಾಯಣ ಗುರುಗಳು ಒಂದು ಜಾತಿ, ಧರ್ಮಕ್ಕೆ ಸೇರಿದವರಲ್ಲ. ಅವರು ಜಾತಿ-ಧರ್ಮದ ತಾರತಮ್ಯಗಳನ್ನು ಮೀರಿದ ವಿಶ್ವಮಾನವ. ಹೀಗಾಗಿ ವಿಶ್ವ ಮಾನವ ನಾರಾಯಣಗುರುಗಳ ಜಯಂತಿಯನ್ನು ಸರ್ಕಾರವೇ ಆಚರಿಸಬೇಕು ಎಂದು ಆದೇಶ ಮಾಡಿದೆ ಎಂದು ಮುಖ್ಯಮಂತ್ರಿಗಳು ವಿವರಿಸಿದರು.
