Rajasthan : ರಾಜಸ್ಥಾನದ (Rajasthan)ಡುಂಗರ್ಪುರದಲ್ಲಿ ಅನ್ಯ ಕೋಮಿನ ಯುವಕರು ಹಿಂದೂ ವಿದ್ಯಾರ್ಥಿನಿಯನ್ನು ಚುಡಾಯಿಸಿದ ಕಾರಣಕ್ಕೆ ಕೋಪಗೊಂಡ ಜನರು ಮಸೀದಿಯನ್ನು (Mosque)ಧ್ವಂಸಗೊಳಿಸಿರುವ ಘಟನೆ ನಡೆದಿದೆ.
ಡುಂಗರ್‌ಪುರದ ದೋವ್ಡಾ ಪೊಲೀಸ್ ಠಾಣೆ ವ್ಯಾಪ್ತಿಯ ಬಂಕೋರಾ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮಾಹಿತಿ ಪ್ರಕಾರ ಬಂಕೋಡ ಗ್ರಾಮದಲ್ಲಿ ವಾಸವಾಗಿರುವ ವಿದ್ಯಾರ್ಥಿನಿಯೊಬ್ಬಳು ಶಾಲೆಯಿಂದ ಮನೆಗೆ ಹಿಂತಿರುಗುತ್ತಿದ್ದ ಸಂದರ್ಭ ದಾರಿ ಮಧ್ಯೆ ಅನ್ಯಕೋಮಿನ ಯುವಕರು ವಿದ್ಯಾರ್ಥಿನಿಯನ್ನು ತಡೆದು ಕಿರುಕುಳ ನೀಡಿದ್ದಾರೆ ಎನ್ನಲಾಗಿದೆ.ಘಟನೆಯಿಂದ ಕುಪಿತರಾಗಿ ರೊಚ್ಚಿಗೆದ್ದ ಜನರು ಮೂರ್ನಾಲ್ಕು ಬೈಕ್ಗಳಿಗೆ ಬೆಂಕಿ ಹಚ್ಚಿರುವ ಜೊತೆಗೆ ಮಸೀದಿಯನ್ನು ಧ್ವಂಸಗೊಳಿಸಿದ ಘಟನೆ ವರದಿಯಾಗಿದೆ.
ಆರೋಪಿಗಳಿಂದ ತಪ್ಪಿಸಿಕೊಂಡ ವಿದ್ಯಾರ್ಥಿನಿ ಮನೆಗೆ ತಲುಪಿ ಮನೆಯವರಿಗೆ ವಿಷಯ ತಿಳಿಸಿದ್ದು, ಕೋಪಗೊಂಡ ಪೋಷಕರು ಆರೋಪಿಯ ಮನೆಗೆ ದಾಂದಲೆ ನಡೆಸಲು ತೆರಳಿದ್ದಾರೆ. ಆದರೆ, ಆರೋಪಿ ಅಷ್ಟರಲ್ಲಿ ಮನೆಯಿಂದ ಕಾಲ್ಕಿತ್ತಿದ್ದಾನೆ. ಇದರಿಂದ ಮತ್ತಷ್ಟು ಕುಪಿತರಾದ ವಿದ್ಯಾರ್ಥಿಯ ಕುಟುಂಬಸ್ಥರು ಆರೋಪಿಯ ಸಂಬಂಧಿಯನ್ನ ಮನೆಯಿಂದ ಹೊರಕ್ಕೆ ಕರೆದುಕೊಂಡು ಹೋಗಿ ತೀವ್ರವಾಗಿ ಥಳಿಸಿದ್ದು, ಆರೋಪಿಗಳ ಮನೆಯ ಹೊರಗೆ ನಿಲ್ಲಿಸಿದ್ದ ಎರಡ್ಮೂರು ಬೈಕ್ ಗಳಿಗೆ ಬೆಂಕಿ ಹಚ್ಚಿದ್ದಾರೆ ಎನ್ನಲಾಗಿದೆ. ಇದರ ಜೊತೆಗೆ ಸಮೀಪದ ಮಸೀದಿಯನ್ನು ಧ್ವಂಸಗೊಳಿಸಿದ್ದಲ್ಲದೇ, ಆರೋಪಿಯ ತಂದೆಯ ಅಂಗಡಿಗೆ ಬೆಂಕಿ ಹಚ್ಚಿದ್ದಾರೆ. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಆಕ್ರೋಶಗೊಂಡ ಜನರನ್ನು ಸಾಂತ್ವನ ಹೇಳಿದ್ದಾರೆ.ರಾಜಸ್ಥಾನದ ಡುಂಗರ್‌ಪುರದಲ್ಲಿ ಕೋಮು ಉದ್ವಿಗ್ನದ ಪರಿಸ್ಥಿತಿ ಉಂಟಾಗಿದ್ದು, ಪೊಲೀಸರು ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ನಿಯಂತ್ರಿಸಲು ಯತ್ನಿಸಿದ್ದಾರೆ ಎಂದು ವರದಿಯಾಗಿದೆ.
ಈ ಕುರಿತು ಪೊಲೀಸರು ವಿದ್ಯಾರ್ಥಿನಿಯ ಕುಟುಂಬದವರ ದೂರಿನ ಮೇರೆಗೆ ಆರೋಪಿ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಆರೋಪಿಗಳು ಪೊಲೀಸರ ಮುಂದೆ ಶರಣಾಗಿದ್ದು, ಘಟನಾ ಸ್ಥಳದಲ್ಲಿ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: Nipha Virus: ನಿಫಾ ವೈರಸ್ ಆರ್ಭಟ- ಶಾಲಾ ಕಾಲೇಜಿಗೆ ರಜೆ, ಸದ್ಯದಲ್ಲೇ ಲಾಕ್ ಡೌನ್ ಘೋಷಣೆ?
