Chhattisghar: ಮೊಬೈಲ್ ಫೋನ್ ನಲ್ಲಿ ಗದರ್ -2 ಚಲನಚಿತ್ರವನ್ನು ವೀಕ್ಷಿಸಿದ ಯುವಕನು ‘ಹಿಂದೂಸ್ತಾನ್ ಜಿಂದಾಬಾದ್’ ಘೋಷಣೆ ಕೂಗಿದ್ದಕ್ಕಾಗಿ ಆತನ ಗೆಳೆಯರೇ ಅವನನ್ನು ಬರ್ಬರವಾಗಿ ಹತ್ಯೆ ಮಾಡಲಾದ ಅಮಾನುಷ ಘಟನೆ ಬೆಳಕಿಗೆ ಬಂದಿದೆ.
ಹೌದು, ಗದರ್ 2 (Gadar 2) ಸಿನಿಮಾದ ಕ್ಲೈಮ್ಯಾಕ್ಸ್ ನೋಡಿ ಭಾವೋದ್ವೇಗದಿಂದ ‘ಹಿಂದೂಸ್ತಾನ್ ಜಿಂದಾಬಾದ್’ (Hindustan Zindabad) ಎಂದು ಕೂಗಿದ ವ್ಯಕ್ತಿಯನ್ನು ಆತನ ಸ್ನೇಹಿತರೇ ಹೊಡೆದು ಕೊಂದಿರುವ ಅಮಾನವೀಯ ಘಟನೆ ಛತ್ತೀಸಗಢದಲ್ಲಿ (Chhattisgarh) ನಡೆದಿದೆ.
ಅಂದಹಾಗೆ ಮಲ್ಕಿತ್ ಸಿಂಗ್ ಅಲಿಯಾಸ್ ವೀರು (30) ತಸವೂರ್, ಫೈಜಲ್, ಶುಭಂ ಲಹರೆ ಅಲಿಯಾಸ್ ಬಬ್ಲು ಮತ್ತು ತರುಣ್ ನಿಷಾದ್ ಎಂಬ ನಾಲ್ವರು ಒಟ್ಟಾಗಿ ಸಿನಿಮಾ ನೋಡುತ್ತಿದ್ದರು. ಈ ವೇಳೆ ಮಲ್ಕಿತ್ ಸಿಂಗ್ ಅಲಿಯಾಸ್ ವೀರು ಹಿಂದೂಸ್ಥಾನ್ ಜಿಂದಾಬಾದ್ ಎಂದು ಕೂಗಿದ್ದಾನೆ. ಈ ವೇಳೆ ಸಮೀಪದಲ್ಲೇ ಇದ್ದ ಅನ್ಯಕೋಮಿನ ಸ್ನೇಹಿತರು ತಮ್ಮನ್ನು ವಿನಾಕಾರಣ ಚುಡಾಯಿಸುವುದಕ್ಕೆ ಈತ ಹೀಗೆ ಕೂಗಿದ್ದಾನೆ ಎಂದು ಕುಪಿತಗೊಂಡು ಹಲ್ಲೆ ನಡೆಸಿದ್ದಾರೆ. ಘಟನೆ ನಡೆದಾಗ ಆರೋಪಿಗಳು ಪಾನಮತ್ತರಾಗಿದ್ದರು ಎಂದು ವರದಿಗಳು ತಿಳಿಸಿವೆ.
ಇದೀಗ ತೀವ್ರವಾಗಿ ಗಾಯಗೊಂಡಿದ್ದ ವ್ಯಕ್ತಿ ಸಾವನ್ನಪ್ಪಿದ್ದಾನೆ. ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕೊಲೆಯ ಬಗ್ಗೆ ಮಾಹಿತಿ ಪಡೆದ ಕೂಡಲೇ, ಮಲ್ಕಿತ್ ಅವರ ಕುಟುಂಬ ಸದಸ್ಯರು, ಸಿಖ್ ಸಮಾಜದ ಜನರು ಮತ್ತು ಸಾರ್ವಜನಿಕ ಪ್ರತಿನಿಧಿಗಳು ಖುರ್ಸಿಪರ್ ಪೊಲೀಸ್ ಠಾಣೆಗೆದೌಡಾಯಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಲಾಗಿತ್ತು. ಮಲ್ಕಿತ್ ಪತ್ನಿಗೆ 50 ಲಕ್ಷ ಪರಿಹಾರ ಹಾಗೂ ಸರ್ಕಾರಿ ಉದ್ಯೋಗ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಆರೋಪಿಗಳಲ್ಲಿ ಒಬ್ಬ ಪರಾರಿಯಾಗಿದ್ದಾನೆ. ಮಲ್ಕಿತ್ ಅವರ ತಂದೆ ಕುಲವಂತ್ ಸಿಂಗ್ ಖುರ್ಸಿಪರ್ನ ಗುರುದ್ವಾರದ ಮುಖ್ಯಸ್ಥರಾಗಿದ್ದಾರೆ.
