Mangalore city bus: ಮಂಗಳೂರಿನ ನಗರದ ಕಂಕನಾಡಿ ನಗರ ಠಾಣಾ ವ್ಯಾಪ್ತಿಯ ಅಡ್ಯಾರ್ ಕಣ್ಣೂರಿನಲ್ಲಿ ಮಂಗಳವಾರ ಸಂಜೆ ವೇಳೆಗೆ ಖಾಸಗಿ ಸಿಟಿ ಬಸ್‌ನ(Mangalore City Bus)ನಿರ್ವಾಹಕನಿಗೆ ಪ್ರಯಾಣಿಕರಿಂದ ಹಲ್ಲೆ ಮತ್ತು ಪರಸ್ಪರ ಜಟಾಪಟಿ ನಡೆದಿದೆ ಎಂದು ವರದಿಯಾಗಿದೆ.
ಸಂಜೆ 6.15ರ ವೇಳೆಗೆ ಸ್ಟೇಟ್‌ಬ್ಯಾಂಕ್‌ನಿಂದ ಕಣ್ಣೂರಿಗೆ ಹೋಗುತ್ತಿದ್ದ ಬಸ್‌ನಲ್ಲಿದ್ದ ಪ್ರಯಾಣಿಕರೊಬ್ಬರು ನಿರ್ವಾಹಕನಿಗೆ ಕಣ್ಣೂರು ಚೆಕ್‌ಪೋಸ್ಟ್‌ಗಿಂತ ಸ್ವಲ್ಪ ಹಿಂದೆ ಬಸ್ಸು ನಿಲ್ಲಿಸುವಂತೆ ಸೂಚಿಸಿದ್ದಾರೆ. ಆದರೆ ನಿರ್ವಾಹಕ ಮುಂದಿನ ನಿಲ್ದಾಣದಲ್ಲಿ ನಿಲ್ಲಿಸುವುದಾಗಿ ತಿಳಿಸಿದ್ದಾನೆ ಎನ್ನಲಾಗಿದೆ. ಈ ಸಂದರ್ಭ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ಈ ಸಂದರ್ಭ ಬಸ್ ನಿರ್ವಾಹಕನ ಮೇಲೆ ಪ್ರಯಾಣಿಕರು ಹಲ್ಲೆ ಮಾಡಿದ್ದಾರೆ. ಹೀಗಾಗಿ, ನಿರ್ವಾಹಕ ಮತ್ತು ಪ್ರಯಾಣಿಕರ ನಡುವೆ ಪರಸ್ಪರ ಹೊಡೆದಾಟ ನಡೆದಿದೆ ಎನ್ನಲಾಗಿದೆ.
ಅಡ್ಯಾರ್ ಕಣ್ಣೂರು ಭಾಗದಲ್ಲಿ ಖಾಸಗಿ ಬಸ್ ಸಂಚರಿಸಲು ಅವಕಾಶ ನೀಡದ ಹಿನ್ನೆಲೆ ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಈ ನಡುವೆ ಸಮಯ ನಿಯಮದ ಹಿನ್ನೆಲೆ ಕೆಲವೊಮ್ಮೆ ಕೆಲವು ನಿಲ್ದಾಣಗಳಲ್ಲಿ ಬಸ್ ನಿಲುಗಡೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ನಿರ್ವಾಹಕರು ಇದೆ ವೇಳೆ ದೂರಿದ್ದಾರೆ. ಈ ಕುರಿತು ನಿರ್ವಾಹಕ ಮತ್ತು ಪ್ರಯಾಣಿಕ ಪರಸ್ಪರರ ವಿರುದ್ಧ ದೂರು ನೀಡಿದ್ದು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ. ಗಾಯಗೊಂಡ ಬಸ್ ನಿರ್ವಾಹಕ ಯಶವಂತ್ ಪೂಜಾರಿ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.
