8th Pay Commission: ಕೇಂದ್ರ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ಹೊರ ಬೀಳುವ ಸಾಧ್ಯತೆ ದಟ್ಟವಾಗಿದೆ. ಕೇಂದ್ರ ಸರ್ಕಾರಿ ನೌಕರರ ಬಹುದಿನಗಳ ಬೇಡಿಕೆ ಈಡೇರಲಿದ್ದು, 2024ರ ಜನವರಿಗೆ ತುಟ್ಟಿಭತ್ಯೆ ಹೆಚ್ಚಳ, ಬಾಕಿ ಡಿಎ ಮೊತ್ತ ಪಾವತಿ , 8ನೇ ವೇತನ ಆಯೋಗ (8th Pay Commission)ರಚನೆ ಕುರಿತಂತೆ ಅನೇಕ ಸುದ್ದಿಗಳು ಹೊರ ಬೀಳಲಿದೆ.
ಜನವರಿ 2024 ರ ಹೊತ್ತಿಗೆ, ಉದ್ಯೋಗಿಗಳ ತುಟ್ಟಿಭತ್ಯೆ 50 ಪ್ರತಿಶತವನ್ನು ಮೀರುವ ಸಾಧ್ಯತೆಯಿದ್ದು, ಪ್ರಸ್ತುತ ಡಿಎ ದರವನ್ನು 7ನೇ ವೇತನ ಆಯೋಗದ ಶಿಫಾರಸ್ಸಿನ ಅನುಸಾರ ತೀರ್ಮಾನ ಮಾಡಲಾಗುತ್ತದೆ. ಹಣದುಬ್ಬರದ ಪರಿಣಾಮವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಉದ್ಯೋಗಿಗಳಿಗೆ ಡಿಎ ಮತ್ತು ಪಿಂಚಣಿದಾರರಿಗೆ ಡಿಆರ್ ನೀಡಲಾಗುತ್ತದೆ. ಮುಂಬರುವ ತಿಂಗಳುಗಳಲ್ಲಿ ಸರ್ಕಾರಿ ನೌಕರರ ಮೂಲ ವೇತನ 50% ಇಲ್ಲವೇ ಅದಕ್ಕಿಂತ ಹೆಚ್ಚಾಗುವ ನಿರೀಕ್ಷೆಯಿದೆ. ಹಿಂದಿನ ವೇತನ ಆಯೋಗದ ಪ್ರಕಾರ 7ನೇ ವೇತನ ಆಯೋಗದ (7th Pay Commission)ಪ್ರಕಾರ ತುಟ್ಟಿಭತ್ಯೆ ಶೇಕಡಾ 50 ಕ್ಕೆ ತಲುಪಿದ ಸಂದರ್ಭ ವೇತನ ಪರಿಷ್ಕರಣೆ ಮಾಡಬೇಕು ಎಂದು ಶಿಫಾರಸು ಮಾಡಲಾಗಿದೆ.
ಏಳನೇ ವೇತನ ಆಯೋಗದ ರಚನೆಯ ಜೊತೆಗೆ, ತುಟ್ಟಿ ಭತ್ಯೆಯ ಪರಿಷ್ಕರಣೆಯ ನಿಯಮಗಳನ್ನು ಸರ್ಕಾರ ಬದಲಾಯಿಸಿದೆ. ಇದರ ಪ್ರಕಾರ ಡಿಎ ಹೆಚ್ಚಳವು ಶೇಕಡಾ 50 ಕ್ಕೆ ತಲುಪಿದ ಸಂದರ್ಭ ಅದು ಶೂನ್ಯಕ್ಕೆ ಇಳಿಯುತ್ತದೆ. ಇದರ ನಂತರ ಮೂಲ ವೇತನಕ್ಕೆ ಶೇ.50 ಡಿಎ ಸೇರ್ಪಡೆಯಾಗಲಿದ್ದು, ಶೂನ್ಯದಿಂದ ಡಿಎ ಲೆಕ್ಕಾಚಾರ ಆರಂಭವಾಗಲಿದೆ. ಡಿಎ ಶೇ.50ಕ್ಕೆ ತಲುಪಿದರೆ ವೇತನ ಪರಿಷ್ಕರಣೆ ಮಾಡಬೇಕಾಗುತ್ತದೆ. ಹೀಗಾಗಿ, ವೇತನ ಪರಿಷ್ಕರಣೆಗಾಗಿ ಹೊಸ ವೇತನ ಆಯೋಗ ರಚಿಸಬೇಕಾಗುತ್ತದೆ. ಮುಂದಿನ ವರ್ಷ ದೇಶದಲ್ಲಿ ಸಾರ್ವತ್ರಿಕ ಚುನಾವಣೆಗಳು ನಡೆಯಲಿರುವುದರಿಂದ ಕೇಂದ್ರ ಸರ್ಕಾರಿ ನೌಕರರಿಗೆ ಸರ್ಕಾರ ಚುನಾವಣೆಗೂ ಮುನ್ನವೇ 8ನೇ ವೇತನ ಆಯೋಗ ರಚನೆ ಮಾಡುವ ನಿರೀಕ್ಷೆ ಕೂಡ ಇದೆ. ಈ ನಡುವೆ ಸರ್ಕಾರ, 8ನೇ ವೇತನ ಆಯೋಗವನ್ನು ಸ್ಥಾಪಿಸುವ ಯಾವುದೇ ಯೋಜನೆ ಪ್ರಸ್ತುತ ಪರಿಗಣನೆಯಲ್ಲಿಲ್ಲ ಎಂದು ಹೇಳಿದೆ.
