Agra: ಆಗ್ರಾದ( Agra)ಖಂದೌಲಿ ಪ್ರದೇಶದಲ್ಲಿ ವಿದ್ಯಾರ್ಥಿಗಳಿಬ್ಬರು ಶಿಕ್ಷಕನ ಮೇಲೆಯೇ ಗುಂಡಿನ ದಾಳಿ ನಡೆಸಿರುವ ಅಚ್ಚರಿಯ ಘಟನೆ ವರದಿಯಾಗಿದೆ.
ಪೊಲೀಸರ ಮಾಹಿತಿ ಅನುಸಾರ, ಮಾಲುಪುರ ನಿವಾಸಿ ಸುಮಿತ್ ರಾಮಸ್ವರೂಪ್ ಶಾಲಾ ಶಿಕ್ಷಕರಾಗಿದ್ದು, ಶಾಲೆ ಮುಗಿದ ನಂತರ ತಮ್ಮದೇ ಕೋಚಿಂಗ್ ಸೆಂಟರ್(Coaching Centre)ಮೂಲಕ ವಿದ್ಯಾರ್ಥಿಗಳಿಗೆ ಕೋಚಿಂಗ್ (Coaching)ನೀಡುತ್ತಿದ್ದರು. ಈ ವೇಳೆ, ಬೈಕ್ ನಲ್ಲಿ ಬಂದ ಇಬ್ಬರು ಹಳೆಯ ವಿದ್ಯಾರ್ಥಿಗಳು, ಕೋಚಿಂಗ್ ಸೆಂಟರ್ ನಲ್ಲಿ ತರಗತಿ ನಡೆಸುತ್ತಿದ್ದ ಸುಮಿತ್ ಮತ್ತು ಇನ್ನೋರ್ವ ಶಿಕ್ಷಕನನ್ನು ಕೂಗಿ ಕರೆದಿದ್ದಾರೆ. ಶಿಕ್ಷಕರು ಹೊರಗೆ ಬರುತ್ತಿದ್ದಂತೆ ಒಬ್ಬ ವಿದ್ಯಾರ್ಥಿ ಏಕಾಏಕಿ ಬಂದೂಕಿನಿಂದ ಗುಂಡಿನ ದಾಳಿ ನಡೆಸಿದ್ದಾನೆ.
ಶಿಕ್ಷಕರಾದ ಸುಮಿತ್ ಎಂಬುವವರಿಗೆ ಕಾಲಿಗೆ ಗುಂಡೇಟು ತಗುಲಿದ್ದು, ಗಂಭೀರವಾಗಿ ಗಾಯಗೊಂಡ ಶಿಕ್ಷಕನನ್ನು ಕೂಡಲೇ ಸ್ಥಳದಲ್ಲಿದ್ದವರು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಆರೋಪಿ ವಿದ್ಯಾರ್ಥಿಗಳು ಗುಂಡಿನ ದಾಳಿ ನಡೆಸಿದ್ದು ಸಾಲದೆಂಬಂತೆ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋವೊಂದನ್ನು ಶೇರ್ ಮಾಡಿದ್ದಾರೆ. ಸದ್ಯ, ಒಂದು ಗುಂಡು ಮಾತ್ರ ಹಾರಿಸಿದ್ದೇವೆ. ‘ಪಿಚ್ಚರ್ ಅಬಿ ಬಾಕಿ ಹೇ’ ಎನ್ನುವ ಹಾಗೆ ಇದು ಕೇವಲ ಸ್ಯಾಂಪಲ್ ಅಷ್ಟೇ!! ಇನ್ನು ಬಾಕಿ ಇದೆ ಎಂದು ಬೆದರಿಕೆಯೊಡ್ಡಿದ್ದಾರೆ ಎನ್ನಲಾಗಿದೆ. ಅಪ್ರಾಪ್ತ ವಿದ್ಯಾರ್ಥಿಗಳಿಂದ ಈ ದಾಳಿ ನಡೆದಿದೆ ಎನ್ನಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಗುಂಡು ಹಾರಿಸಿದ ವಿದ್ಯಾರ್ಥಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
