Ngil mask : ವೃದ್ಧ ದಂಪತಿಗಳಿಂದ ಸಂಪ್ರದಾಯಿಕ ಕಸೂತಿ ಕಲೆಗಳಿದ್ದ ಫಾಂಗ್ ಮಾಸ್ಕ್‌ನ್ನು ಕೇವಲ 13 ಸಾವಿರ ರೂಪಾಯಿಗೆ ಮಾಂಟ್ಪೆಲ್ಲಿಯರ್‌ನಲ್ಲಿ(Montpellier) ಹರಾಜು ಸಂಸ್ಥೆ ಖರೀದಿ ಮಾಡಿ ಅದನ್ನು ಬರೋಬ್ಬರಿ 36 ಕೋಟಿ ರೂಪಾಯಿಗೆ ಮಾರಾಟ ಮಾಡಿದ್ದಾರೆ ಎನ್ನಲಾಗಿದೆ. ಹೀಗಾಗಿ, ತಮಗೆ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿ ಹಿರಿಯ ದಂಪತಿಗಳು ಹರಾಜು ಸಂಸ್ಥೆಯ ವಿರುದ್ಧ ಪೊಲೀಸ್ ಠಾಣೆಯ ಮೆಟ್ಟಿಲೇರಿದ ಘಟನೆ ವರದಿಯಾಗಿದೆ.
ಮೈಲ್ ಆನ್‌ಲೈನ್( MailOnline) ಅವರ ಪ್ರಕಾರ, ಫ್ರಾನ್ಸ್‌ನ ನಿಮ್ಸ್‌ನ ಎಂಭತ್ತರ ಹರೆಯದ ದಂಪತಿಗಳು 2021 ರಲ್ಲಿ ತಮ್ಮ ಮನೆಯನ್ನು ತೆರವು ಮಾಡಿದ ಸಂದರ್ಭ ತಮ್ಮ ಬಳಿ ಇದ್ದ ‘ಎನ್‌ಜಿಲ್’ (Ngil mask) ಎಂಬ ಆಫ್ರಿಕನ್ ಮುಖವಾಡವನ್ನು ಮಾರಾಟ ಮಾಡಲು ತೀರ್ಮಾನಿಸಿದ್ದಾರೆ. ಹೀಗಾಗಿ ಮಿಸ್ಟರ್ ಝೆಡ್ ಎಂದು ಕರೆಯಲ್ಪಡುವ ಆರ್ಟ್ ಡೀಲರ್ ಒಬ್ಬರಿಗೆ ಇದನ್ನು ಕೇವಲ 129 ಪೌಂಡ್ ಅಂದರೆ 13,208 ರೂಪಾಯಿಗಳಿಗೆ ಮಾರಾಟ ಮಾಡಿದ್ದಾರೆ. ಇದಾದ ಕೆಲವು ತಿಂಗಳ ಬಳಿಕ ಮಾಂಟ್ಪೆಲ್ಲಿಯರ್‌ನಲ್ಲಿ(Montpellier) ಹರಾಜಿನಲ್ಲಿ ಈ ಆರ್ಟ್ ಡೀಲರ್ ಈ ಮುಖವಾಡವನ್ನು 3.6 ಮಿಲಿಯನ್ ಪೌಂಡ್ ಅಂದರೆ, ಸುಮಾರು 36,86,17320 ಭಾರತೀಯ ರೂಪಾಯಿ ಮೌಲ್ಯಕ್ಕೆ ಮಾರಾಟ ಮಾಡಿದ್ದಾನೆ.
ತಾವು ಮಾರಿದ್ದ ಮುಖವಾಡಕ್ಕೆ ದುಬಾರಿ ಬೆಲೆ ಇರಬಹುದು ಎಂಬ ಅಂದಾಜು ಇರದ ವೃದ್ದ ದಂಪತಿಗಳಿಗೆ ದಿನಪತ್ರಿಕೆಯಲ್ಲಿ ಇಷ್ಟೊಂದು ದುಬಾರಿ ಬೆಲೆಗೆ ಮಾರಾಟವಾಗಿದ್ದು ತಿಳಿದು ಅಚ್ಚರಿಯಾಗಿದೆ. ತಮ್ಮಿಂದ ಪುಡಿಗಾಸಿನ ಬೆಲೆಗೆ ಮುಖವಾಡ ಖರೀದಿ ಮಾಡಿ ಕೋಟ್ಯಂತರ ಬೆಲೆಗೆ ಅದನ್ನು ಮಾರಾಟ ಮಾಡಿದ ಮಿಸ್ಟರ್ ಜೆಡ್ ವಿರುದ್ಧ ದಂಪತಿಗಳು ದೂರು ನೀಡಿದ್ದಾರೆ. ಈ ಮುಖವಾಡದಕ್ಕೆ ಇರುವ ನಿಜವಾದ ಮೌಲ್ಯದ ಅರಿವಿದ್ದರು ಕೂಡ ಮಿಸ್ಟರ್ ಜೆಡ್ ನಮಗೆ ಪುಡಿಗಾಸು ನೀಡಿ ಮೋಸ ಮಾಡಿದ್ದಾರೆ ಎಂದು ಆರೋಪಿಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಈ ಮುಖವಾಡವನ್ನು ತಪಾಸಣೆ ಮಾಡಿದಾಗ 19 ನೇ ಶತಮಾನಕ್ಕೆ ಸೇರಿದ್ದು ಎಂಬ ವಿಚಾರ ಬಯಲಾಗಿದೆ. ನ್ಯಾಯಾಲಯದ ದಾಖಲೆಗಳು ಈ ವಸ್ತುವನ್ನು ಅಪರೂಪವಾಗಿ ದೊರೆಯುವ ವಸ್ತು ಎಂದು ಪರಿಗಣಿಸಿದೆ. ಈ ದಂಪತಿಗಳಲ್ಲಿ ಗಂಡನ ಅಜ್ಜ ಆಫ್ರಿಕಾ ವಸಾಹತುಶಾಹಿಗಳ ಹಿಡಿತದಲ್ಲಿದ್ದಾಗ ಗವರ್ನರ್ ಆಗಿದ್ದರಿಂದ ಅವರಿಗೆ ಈ ಮುಖವಾಡವನ್ನು ಸುಪರ್ದಿಗೆ ನೀಡಲಾಗಿತ್ತು.ಜಗತ್ತಿನಾದ್ಯಂತ ಇರುವ ವಸ್ತುಸಂಗ್ರಹಾಲಯಗಳಲ್ಲಿ ಕೇವಲ ಬೆರಳೆಣಿಕೆಯ ಸಂಖ್ಯೆಯಲ್ಲಿ ಮಾತ್ರ ಇವು ಕಂಡು ಬರುತ್ತವೆ ಎನ್ನಲಾಗಿದೆ.ಇದು ಆಫ್ರಿಕನ್ ಹೊರತುಪಡಿಸಿ ಉಳಿದ ದೇಶಗಳಲ್ಲಿ ಕಾಣಸಿಗುವುದು ವಿರಳ. ಹೀಗಾಗಿ, ಈ ಕುರಿತು ಪ್ರಕರಣ ದಾಖಲಾಗಿ, ದಂಪತಿಗಳ ದೂರು ನ್ಯಾಯ ಸಮ್ಮತವಾದದ್ದು ಎಂದು ನೈಮ್‌ನ (Nimes) ನ್ಯಾಯಾಲಯ ಅಭಿಪ್ರಾಯಪಟ್ಟಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ:Israel-Gaza conflict: ಇಸ್ರೇಲ್ ರೀತಿ ಭಾರತದ ಮೇಲೂ ದಾಳಿ ?! ಅರೆ… ಏನಿದು ಶಾಕಿಂಗ್ ನ್ಯೂಸ್ ?!
