ಕನ್ನಡದ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ 10ನೇ ಸೀಸನ್ ಗ್ರ್ಯಾಂಡ್ ಓಪನಿಂಗ್ ಮೂಲಕ ಯಶಸ್ವಿಯಾಗಿ ಪ್ರಾರಂಭಗೊಂಡಿದೆ. ಮನೆಗೆ ಎಂಟ್ರಿ ಕೊಟ್ಟಿರುವ ಸದಸ್ಯರ ಕಿರು ಪರಿಚಯ ಈಗಾಗಲೇ ಮುಗಿದಿದ್ದು, ಸಣ್ಣಗೆ ಮನೆ ನಾರ್ಮಲ್ ಮನೆಯ ಥರವೇ ಆಗಲು ಆರಂಭಗೊಂಡಿದೆ. ತಮಾಷೆ, ಮುನಿಸು ಮನಸ್ತಾಪಗಳು ಜತೆ ಸೀಸನ್ ಆರಂಭ ಆಗಿದೆ.
ಬಿಗ್ ಬಾಸ್ ಮನೆಯಲ್ಲಿ ಸಮರ್ಥರು ಮತ್ತು ಅಸಮರ್ಥರು ಎಂಬ ಎರಡು ಗುಂಪುಗಳನ್ನು ಮಾಡಲಾಗಿದೆ. ಈ ಪೈಕಿ ಅಸಮರ್ಥರ ಗುಂಪಿನಲ್ಲಿ ಗುರುತಿಸಿಕೊಂಡವರು ಮೈಸೂರಿನ ಭಾರೀ ಖ್ಯಾತಿಯ ಉರಗ ರಕ್ಷಕ ಸ್ನೇಕ್ ಶ್ಯಾಮ್. ತಮ್ಮ ಜೀವಮಾನದಲ್ಲಿ ಸಾವಿರಾರು ಹಾವು ಹಿಡಿದು ರಕ್ಷಿಸಿದ ಅವರು ಹಾವುಗಳ ಕುರಿತಂತೆ ರೋಚಕ ಸಂಗತಿಗಳನ್ನು ಮನೆಯ ಸದಸ್ಯರೊಡನೆ ಹಂಚಿಕೊಂಡಿದ್ದಾರೆ. ಆತ ನೀಡಿದ ವಿವರಗಳನ್ನು ಕೇಳಿದ ಬಿಗ್ ಬಾಸ್ ಹುಡುಗ ಹುಡುಗಿಯರು ಬೆಕ್ಕಸ ಬೆರಗಾಗಿದ್ದಾರೆ.
ಸ್ಪರ್ಧಿಗಳೆಲ್ಲ ಸ್ವಿಮಿಂಗ್ ಪೂಲ್ ಬಳಿ ಕುಳಿತು ಹರಟೆ ಹೊಡೆಯುತ್ತಿದ್ದಾಗ ಹಾವುಗಳ ಕತೆ ಕಂತೆ ಕಂತೆಯಾಗಿ ಹೆಡೆ ಬಿಚ್ಚಿ ಕೊಂಡಿದೆ. ಸರ್ಪಗಳ ಕುರಿತಾದ ಹಲವು ರೋಚಕ ಸಂಗತಿಗಳನ್ನು, ವಿವರವಾಗಿ, ಒಂದೊಂದಾಗಿ ಮತ್ತು ಆಕರ್ಷಕವಾಗಿ ಮತ್ತು ನಿರರ್ಗಳವಾಗಿ ತೆರೆದಿಟ್ಟ ಸ್ನೇಕ್ ಶ್ಯಾಮ್ ನೀಡಿದ ವಿವರಗಳು ಏನು ಅನ್ನೋದನ್ನು ನಾವಿಲ್ಲಿ ನಿಮಗೆ ಹೇಳುತ್ತಿದ್ದೇವೆ.
ಹಾವುಗಳ ಬಗ್ಗೆ ‘ಸ್ನೇಕ್ ‘ ಹೇಳಿದ ಕಥೆ !
ಪ್ರಾಣಿಗಳಲ್ಲಿ ಫೈಟಿಂಗ್ ಆಗೋದು ಈಟಿಂಗ್ ಮತ್ತು ಮೆಟಿಂಗ್ – ಈ ಎರಡಕ್ಕೇನೇ. ನಮ್ ಥರ ಅಲ್ಲ, ಅವು ಎಲ್ಲದಕ್ಕೂ ಹೊಡೆದಾಡಿ ಕೊಳ್ಳೋದಿಲ್ಲ. ಮೇಟಿಂಗ್ ಮುಗಿದ ಮೇಲೆ ಗಂಡು ಹಾವು ಅದರ ಪಾಡಿಗೆ ತಾನು ಸರಿದು ಹೋಗುತ್ತದೆ. ಹಾವುಗಳಲ್ಲಿ 45-65 ದಿನಗಳ ಒಳಗೆ ಮೊಟ್ಟೆ ಬೆಳವಣಿಗೆಯಾಗುತ್ತದೆ. ಹೆಣ್ಣು ಹಾವು, ತನ್ನ ಹೊಟ್ಟೆಯೊಳಗೆ ಮೊಟ್ಟೆ ಡೆವಲೆಪ್ ಆದಮೇಲೆ ಸರಿಯಾಗಿರುವ ಜಾಗ ಹುಡುಕಿಕೊಂಡು ಮೊಟ್ಟೆಗಳನ್ನು ಇಡುತ್ತದೆ. ತನ್ನ ಒಳಗೆ ಮೊಟ್ಟೆ ಇರೋ ಸಂಗತಿ ಹೆಣ್ಣು ಹಾವಿಗೆ ಗೊತ್ತು. ಹಾಗಾಗಿ, ಅದೂ ಟೆಂಪರೇಚರ್ ಸರಿಯಾಗಿರುವ ಜಾಗ ಸಿಗುವ ಹಾವು ತಾಳ್ಮೆಯಿಂದ ಕಾಯುತ್ತದೆ. ನಮ್ಮಂತೆ ಒಂಬತ್ತು ತಿಂಗಳಾಯ್ತು, ಹೊಟ್ಟೆ ನೋವು ಶುರುವಾಯ್ತು, ಡಾಕ್ಟರ್ ಹತ್ರ ಹೋಗ್ಬೇಕು, ಸಿಸೇರಿಯನ್ ಮಾಡಿಸಬೇಕು ಎಂಬ ರೀತಿ ಅವು ಮಾಡಲ್ಲ. ಸರಿಯಾದ ಜಾಗ ಸಿಗುವ ತನಕ ಮೊಟ್ಟೆಗಳನ್ನು ಹೊಟ್ಟೆಯಲ್ಲಿ ಜತನದಿಂದ ಇಟ್ಟುಕೊಂಡಿರತ್ತದೆ. ಅವುಗಳಲ್ಲೂ ಒಂದು ಅಮ್ಮ ಭಾವ ಇರುತ್ತದೆ.
ನಂತರ ಮೊಟ್ಟೆ ಮಲಗಿಸಿದ ಮೇಲೆ ಕೆಲವು ಜಾತಿ ಹಾವುಗಳು ಸುರುಳಿ ಸುತ್ಕೊಂಡು ಮೊಟ್ಟೆ ಮೇಲೆ ಕಾವು ಕೊಡುತ್ತವೆ. ಇನ್ನು ಕೆಲವು ಜಾತಿಯ ಹಾವುಗಳು ಮೊಟ್ಟೆಗಳನ್ನಿಟ್ಟುಪಕ್ಕದಲ್ಲೇ ಕೂತು ಕಾವಲು ಕಾಯುತ್ತವೆ. ಮೊಟ್ಟೆಯಿಟ್ಟ ನಂತರ 45-65 ದಿನಗಳಲ್ಲಿ ಮರಿಗಳು ಈಚೆ ಬರುತ್ತವೆ. ಎಲ್ಲ ಜಾತಿಯ ಹಾವುಗಳು ಮೊಟ್ಟೆಗಳನ್ನು ಇಟ್ಟರೆ, ಕೇವಲ ಮೂರು ಜಾತಿಯ ಹಾವುಗಳು ಮರಿಗಳನ್ನು ಹಾಕುತ್ತದೆ. ಅವು ಯಾವುವೆಂದರೆ – ಹಸಿರು ಹಾವು, ಮಣ್ಣುಮುಕ್ಕ ಹಾವು ಮತ್ತು ಮಂಡಲದ ಹಾವು. ಈ ಮೂರು ಜಾತಿಯ ಹಾವುಗಳು ಮರಿ ಹಾಕುತ್ತದೆ ಎಂದು ಹಾವುಗಳ ಬದುಕಿನ ಬಗ್ಗೆ ‘ಸ್ನೇಕ್ ‘ ಮಾತು ಶುರು ಮಾಡಿದ್ದಾರೆ.
“ಸಸ್ತನಿ ಅಂದ್ರೆ ಮರಿಗಳನ್ನು ಹಾಕಿ ಮೊಲೆಯೂಣಿಸಬೇಕು. ನಾವು ಮನುಷ್ಯರು ಸಸ್ತನಿಗಳು. ಆದರೆ ಇವು ಸಸ್ತನಿ ಅಲ್ಲ. ಈ ಹಾವುಗಳು ಹಾಗೆ ಮಾಡಲ್ಲ. ಒಂದು ವಿಷಯ ಹೇಳಬೇಕು, ಹಾವಿನ ಪ್ರತಿಯೊಂದು ಮರಿಗಳೂ ಹುಟ್ಟಿದ ತಕ್ಷಣದಿಂದ ಸಂಪೂರ್ಣ ಸ್ವಾವಲಂಬಿಗಳಾಗಿರುತ್ತವೆ. ನಮ್ಮಂತೆ ಹುಟ್ಟಿದ ಮೇಲೆ ಬೇರೆಯವರ ಮೇಲೆ ಅವುಗಳು ಡಿಪೆಂಡ್ ಆಗಿರುವುದಿಲ್ಲ. ಅವರ ಪಾಡಿಗೆ ಅವು ಶುರುವಿನಿಂದ ತಮ್ಮ ಆಹಾರವನ್ನು ಹುಡುಕಿಕೊಂಡು ಹೋಗುತ್ತಿರುತ್ತವೆ. ತಾಯಿ-ತಂದೆಯ ಮೇಲೆ ಅವುಗಳು ಅವಲಂಬನೆ ಮಾಡುವುದೇ ಇಲ್ಲ.”
“ಎಲ್ಲ ಜಾತಿಯ ಹಾವುಗಳಲ್ಲಿಯೂ ಗಂಡು ಹಾವು ಇದೆ. ಆದರೆ ಒಂದು ಜಾತಿಯ ಹಾವುಗಳಲ್ಲಿ ಗಂಡು ಹಾವು ಅನ್ನೋದೇ ಇಲ್ಲ. ಹೆಣ್ಣು ಹಾವೇ ಸೆಲ್ಫ್ ರಿಪ್ರೊಡಕ್ಷನ್ ಮಾಡಿಕೊಳ್ಳುತ್ತದೆ. ಆ ಜಾತಿಯ ಹಾವುಗಳನ್ನು ನೀವೆಲ್ಲರೂ ನೋಡಿರುತ್ತೀರಿ. ಎಲ್ಲರ ಮನೆಯ ಅಡುಗೆ ಮನೆ, ಬಚ್ಚಲ ಮನೆ, ಟಾಯ್ಲೆಟ್ ನಲ್ಲೆಲ್ಲ ಓಡಾಡ್ತಿರುತ್ತೆ. ಪಿಣಿಪಿಣಿಪಿಣಿ ಅಂತ…!!! ಇದು ಎರೆಹುಳದ ಥರ ಇರತ್ತೆ. ಅದು ಭಾರತದಲ್ಲಿನ ಅತಿ ಸಣ್ಣ ಹಾವು. ಅದು ರಿಪ್ರೊಡಕ್ಷನ್ ಅನ್ನು ಅದೇ ಮಾಡಿಕೊಳ್ಳುತ್ತದೆ. ಗಂಡಿನ ಸಾವಾಸ ಯಾಕ್ ಬೇಕು ?!”
“ಎಲ್ಲ ಜಾತಿಯ ಹಾವುಗಳೂ ಬಿಲಗಳಲ್ಲಿ, ಪೊಟರೆಗಳಲ್ಲಿ ಮೊಟ್ಟೆಯಿಟ್ಟರೆ, ಒಂದೇ ಒಂದು ಜಾತಿಯ ಹಾವು ತಾನೇ ಗೂಡನ್ನು ಕಟ್ಟಿ ಮೊಟ್ಟೆ ಇಡುತ್ತದೆ. ಎಲೆಗಳಿಂದ ಗೂಡು ಕಟ್ಟಿ ಮೊಟ್ಟೆ ಇಡುತ್ತದೆ. ಅದುವೆ ಹಾವುಗಳ ರಾಜ ಕಿಂಗ್ ಕೋಬ್ರಾ!! ಉರಗ ಪ್ರಪಂಚದ ವಿನೂತನ ವಿಸ್ಮಯ ಕುತೂಹಲಕಾರಿ ಲೋಕವನ್ನು ಆಲಿಸುತ್ತ ಹೋದ ಸ್ಪರ್ಧಿಗಳು ಬೆಕ್ಕಸ ಬೆರಗಿನಿಂದ ಕಣ್ಣರಳಿಸಿ ನೋಡಿದ್ದಾರೆ.
ಇದನ್ನು ಓದಿ: KSRTC: ಫ್ರೀ ಬಸ್ಸಲ್ಲಿ ಓಡಾಡೋ ಮಹಿಳೆಯರು, ಪುರುಷರಿಗೆಲ್ಲಾ ಭರ್ಜರಿ ಸುದ್ದಿ – ದಸರಾ ಪ್ರಯುಕ್ತ KSRTC ಕೊಡ್ತು ಬಂಪರ್ ಆಫರ್
