KAS Recruitment: ಉದ್ಯೋಗಾಂಕ್ಷಿಗಳೇ ಗಮನಿಸಿ, ನಿಮಗೊಂದು ಮುಖ್ಯ ಮಾಹಿತಿ ಇಲ್ಲಿದೆ ನೋಡಿ. ರಾಜ್ಯ ಸರ್ಕಾರ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಗೆಜೆಟೆಡ್ ಪ್ರೊಬೇಷನರಿ (KAS) ಗ್ರೂಪ್ ‘ಎ’ ಮತ್ತು ‘ಬಿ’ ವೃಂದದ 300ಕ್ಕೂ ಹೆಚ್ಚು ಹುದ್ದೆಗಳನ್ನು(KAS Recruitment)ಭರ್ತಿ ಮಾಡಲು ಪ್ರಕ್ರಿಯೆ ಆರಂಭಿಸಿದೆ.
ಸರ್ಕಾರ ಈಗಾಗಲೇ ಆರ್ಥಿಕ ಇಲಾಖೆಯಿಂದ ಮಂಜೂರಾತಿ ಪಡೆದು, ಮೀಸಲಾತಿ (ರೋಸ್ಟರ್) ಅಳವಡಿಸಿ ಖಾಲಿ ಹುದ್ದೆಗಳ ಮಾಹಿತಿ ನೀಡುವಂತೆ ಎಲ್ಲ ಇಲಾಖೆಗಳಿಗೆ ಸೂಚನೆ ನೀಡಿದೆ. ಹುದ್ದೆಗಳನ್ನು ಭರ್ತಿ ಮಾಡುವ ಸಂಬಂಧ ಆದಷ್ಟು ಶೀಘ್ರದಲ್ಲಿ ಕೆಪಿಎಸ್‌ಸಿಗೆ ಪ್ರಸ್ತಾವ ಕಳುಹಿಸಲು ಉದ್ದೇಶಿಸಲಾಗಿದೆ. ನವೆಂಬರ್ ತಿಂಗಳ ಒಳಗೆ ಈ ಪ್ರಕ್ರಿಯೆ ಮುಗಿಸಲು ತಯಾರಿ ನಡೆದಿರುವ ಕುರಿತು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ (DPAR) ಮೂಲಗಳು ಮಾಹಿತಿ ನೀಡಿವೆ.
ರಾಜ್ಯದಲ್ಲಿ ಗ್ರೂಪ್ ‘ಎ’ ಮತ್ತು ‘ಬಿ’ ವೃಂದದ 500ಕ್ಕೂ ಹೆಚ್ಚು ಹುದ್ದೆಗಳು ಖಾಲಿಯಿದ್ದು, ನಾಲ್ಕು ಲಕ್ಷಕ್ಕೂ ಹೆಚ್ಚು ಗೆಜೆಟೆಡ್ ಪ್ರೊಬೇಷನರಿ ಹುದ್ದೆ ಆಕಾಂಕ್ಷಿಗಳು ನೇಮಕಾತಿ ಅಧಿಸೂಚನೆಯ ನಿರೀಕ್ಷೆಯಲ್ಲಿದ್ದಾರೆ. ಈ ನಡುವೆ, 2023ರ ಫೆ. 27ರಂದು ಡಿಪಿಎಆರ್ ಪ್ರಧಾನ ಕಾರ್ಯದರ್ಶಿಗೆ ಕೆಪಿಎಸ್‌ಸಿ ಕಾರ್ಯದರ್ಶಿಯಾಗಿದ್ದ ವಿಕಾಸ್ ಕಿಶೋರ್ ಸುರಳ್ಕರ್ ಕೆಎಎಸ್ ಹುದ್ದೆ ಭರ್ತಿಗೆ ಸಂಬಂಧಿಸಿದಂತೆ ಪತ್ರ ಬರೆದಿದ್ದಾರೆ. 2017ರ ನಂತರ ನೇಮಕಾತಿ ಆಗದಿರುವ ಹಿನ್ನಲೆ, ಅನೇಕ ಹುದ್ದೆ ಆಕಾಂಕ್ಷಿಗಳು ನೇಮಕಾತಿಗೆ ನಿಗದಿಪಡಿಸಿದ ವಯೋಮಿತಿ ಸಡಿಲಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ್ದಾರೆ. ಈ ಮನವಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಂದಿಸಿದ್ದು, ವಯೋಮಿತಿ ಸಡಿಲಿಸಲು ಜೊತೆಗೆ ಪರೀಕ್ಷೆಗೆ ಒಂದು ಹೆಚ್ಚುವರಿ ಅವಕಾಶ ನೀಡಲು ಕ್ರಮ ತೆಗೆದುಕೊಳ್ಳುವಂತೆ ಟಿಪ್ಪಣಿ ಮೂಲಕ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
