C T Ravi: ಯಡಿಯೂರಪ್ಪನವರ ಪುತ್ರ ಬಿ ವೈ ವಿಜಯೇಂದ್ರ ಅವರು ಬಿಜೆಪಿಯ ನೂತನ ರಾಜ್ಯಾಧ್ಯಕ್ಷರಾದ ಬಳಿಕ ರಾಜ್ಯ ಬಿಜೆಪಿಯಲ್ಲಿ ಕೆಲವು ಊಹಿಸದ ಬದಲಾವಣೆಗಳು ನಡೆಯುತ್ತಿವೆ. ಕೆಲವು ಹಿರಿಯ ನಾಯಕರು ಅಸಮಾಧಾನಿತರಾಗಿ ಮನದ ನೋವನ್ನು ಪರೋಕ್ಷವಾಗಿ ತೋಡಿಕೊಳ್ಳುತ್ತಿದ್ದಾರೆ. ಅಂತೆಯೇ ಇದೀಗ ಬಿಜೆಪಿ ಪ್ರಬಲ ನಾಯಕ, ಯಾವುದೇ ಜವಬ್ದಾರಿಗಳಿಲ್ಲದೆ ಸುಮ್ಮನಿರುವ ಸಿಟಿ ರವಿ(C T Ravi) ಅವರು ನಿರಾಶದಾಯಕ ನುಡಿಗಳನ್ನಾಡಿ ರಾಜಕೀಯ ಬಿಡುವ ಮಾತನಾಡಿದ್ದಾರೆ.
ಹೌದು, ರಾಜ್ಯಾಧ್ಯಕ್ಷ ಸ್ಥಾನ ಸಿಗುತ್ತದೆ ಎಂದು ಮನಸ್ಸಿನ ಎಲ್ಲೋ ಒಂದು ಕಡೆ ಆಸೆ ಇಟ್ಟುಕೊಂಡಿದ್ದ ಸಿ ಟಿ ರವಿ ಅವರಿಗೆ ಭಾರೀ ನಿರಾಸೆಯಾಗಿರುವದಂತೂ ಸತ್ಯ. ಈಕಡೆ ಶಾಸಕ ಸ್ಥಾನವೂ ಇಲ್ಲದೆ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಯೂ ಇಲ್ಲದೆ ಒಟ್ಟಿನಲ್ಲಿ ಬಿಜೆಪಿಯ ಯಾವೊಂದೂ ಜವಾಬ್ದಾರಿಯೂ ಇಲ್ಲದೆ ಸಿಟಿ ರವಿ ಅವರು ಅತಂತ್ರವಾಗಿದ್ದಾರೆ. ಹೀಗಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ನನಗೆ ರಾಜಕೀಯ ಬೇಡ ಅಂದರೆ ಬಿಟ್ಟು ಬಿಡುತ್ತೇನೆ. ಬೇಡ ಅನಿಸಿದಾಗ ಎಲ್ಲವನ್ನೂ ಬಿಡುತ್ತೇನೆ ಎಂದು ಹೇಳಿದ್ದಾರೆ.
ಚಿಕ್ಕಮಗಳೂರು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಅವರು ಪಕ್ಷ ಏನೂ ಜವಾಬ್ದಾರಿ ಕೊಟ್ಟಿಲ್ಲ ಎಂದರೂ ಬಿಜೆಪಿಗೆ ಮತ ಕೊಡಿ ಎಂದೇ ಕೇಳುತ್ತೇನೆ. ಬೇರ ಪಕ್ಷಕ್ಕೆ ಮತ ಕೊಡಿ ಎಂದು ಕೇಳಲಿಕ್ಕಾಗುವುದಿಲ್ಲ. ನನಗೆ ಕೊಟ್ಟರೆ ಮಾತ್ರ ಬಿಜೆಪಿ ಇಲ್ಲವಾದರೆ ಬಿಜೆಪಿ ಅಲ್ಲ ಎಂದು ಹೇಳಲಿಕ್ಕಾಗುತ್ತದೆಯಾ? ಬುದ್ಧಿ ಬಂದಾಗಿನಿಂದ, ಬಿಜೆಪಿಗೆ ಸೇರಿದಾಗಿನಿಂದ ಬಿಜೆಪಿ ಬಿಟ್ಟು ಬೇರೆ ಪಕ್ಷಕ್ಕೆ ವೋಟ್ ಕೇಳಿಲ್ಲ. ಬೇರೆ ಪಕ್ಷಕ್ಕೆ ವೋಟ್ ಹಾಕಿಲ್ಲ. ನನಗಿರುವುದು ಒಂದೇ ಪಕ್ಷ ಅದು ಬಿಜೆಪಿ. ಅಕಸ್ಮಾತ್ ರಾಜಕೀಯ ಬೇಡ ಎನ್ನಿಸಿದರೆ ರಾಜಕೀಯ ಬಿಟ್ಟು ಕುಳಿತುಕೊಳ್ಳುತ್ತೇನೆ. ಬಿಜೆಪಿಯನ್ನು ಬಿಟ್ಟು ಮತ್ತೊಂದು ಪಕ್ಷಕ್ಕೆ ಹೋಗಿ ರಾಜಕಾರಣ ಮಾಡುವುದಿಲ್ಲ ಎಂದು ಹೇಳಿದ್ದಾರೆ.
ಅಲ್ಲದೆ 20 ವರ್ಷ ಶಾಸಕನಾಗಿ ನನ್ನನ್ನ ನೋಡಿದ್ದೀರಿ. 35 ವರ್ಷದಿಂದ ಪಕ್ಷ ಕಾರ್ಯಕರ್ತನಾಗಿ ವಿವಿಧ ಜವಾಬ್ದಾರಿಗಳನ್ನು ಹೊತ್ತು ಕೆಲಸ ಮಾಡಿದ್ದೇನೆ. ಜಗಳವಾಡಿದರೂ ನಮ್ಮ ಮನೆಯೊಳಗೇ ಜಗಳ, ಹೊಸಿಲು ದಾಟಿ ಬೇರೆಯವರ ಮನೆಗೆ ಹೋಗಿ ನಮ್ಮ ಮನೆ ಸಮಸ್ಯೆ ಬಗೆಹರಿಸಿ ಎಂದು ಕೇಳಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ರಾಜ್ಯದ ಜನತೆಗೆ ಸಿಹಿ ಸುದ್ದಿ- ಇನ್ಮುಂದೆ ‘ಜನನ-ಮರಣ’ ನೋಂದಣಿ ಭಾರೀ ಸುಲಭ !! ಇವರಿಗೆ ಮಾತ್ರ ವಿತರಿಸುವ ಅವಕಾಶ !!
