Ayodhya Ram Mandir: ಉತ್ತರ ಪ್ರದೇಶ ರಾಜ್ಯದ ಅಯೋಧ್ಯೆಯಲ್ಲಿ ರಾಮ ಮಂದಿರದ ಉದ್ಘಾಟನೆ ಅದ್ಧೂರಿಯಾಗಿ ನಡೆಯುವಂತೆ ನೋಡಿಕೊಳ್ಳಲು ಎಲ್ಲಾ ಸಿದ್ಧತೆಗಳನ್ನು ಮಾಡಲಾಗುತ್ತಿದೆ. ಮುಖ್ಯವಾಗಿ ಅಯೋಧ್ಯೆ ರಾಮ ಮಂದಿರದಲ್ಲಿ (Ayodhya Ram Mandir) ಪ್ರತಿಷ್ಠಾಪನೆಯಾಗುವ ರಾಮಲಲ್ಲ ವಿಗ್ರಹದ ಆಯ್ಕೆ ಪ್ರಕ್ರಿಯೆ ಡಿಸೆಂಬರ್ 15ಕ್ಕೆ ನಡೆಯಲಿದೆ ಎಂದು ರಾಮಮಂದಿರ ಟ್ರಸ್ಟ್ ತಿಳಿಸಿದೆ.
ಅಲ್ಲದೇ ರಾಮಲಲ್ಲನ ವಿಗ್ರಹವನ್ನು ಕರ್ನಾಟಕ ಹಾಗೂ ರಾಜಸ್ಥಾನದಿಂದ ತಂದಂತಹ ಶಿಲೆಗಳಲ್ಲಿ ಕೆತ್ತಲಾಗುತ್ತಿದ್ದು, ಕರ್ನಾಟಕದ ಅರುಣ್ ಯೋಗಿರಾಜ್ ಹಾಗೂ ಗಣೇಶ್ ಭಟ್ ಸಹ ಒಂದೊಂದು ಶಿಲೆಗೆ ಮೂರ್ತಿ ರೂಪ ಕೊಡುತ್ತಿದ್ದಾರೆ. ಇದರಲ್ಲಿ ಯಾವುದು ಪ್ರತಿಷ್ಠಾಪನೆಗೆ ಆಯ್ಕೆಯಾಗುತ್ತದೆ ಎಂಬುದನ್ನು ಟ್ರಸ್ಟ್‌ನ ಧಾರ್ಮಿಕ ಮಂಡಳಿ ಆಯ್ಕೆ ಮಾಡುತ್ತದೆ ಎಂದು ಚಂಪತ್ ರಾಯ್ ಹೇಳಿದ್ದಾರೆ.
ಸದ್ಯ ರಾಮ ಮಂದಿರ ಉದ್ಘಾಟನೆಗೆ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ನಟ ಅಮಿತಾಬ್ ಬಚ್ಚನ್ ಸೇರಿ ದೇಶದ 7000 ವಿವಿಐಪಿಗಳಿಗೆ ವಿಶೇಷ ಆಹ್ವಾನ ನೀಡಲಾಗಿದೆ ಎಂದು ರಾಮ ಮಂದಿರ ಟ್ರಸ್ಟ್ ತಿಳಿಸಿದೆ. ಅದರಲ್ಲೂ 7000 ವಿವಿಐಪಿಗಳಲ್ಲಿ ದೇಶದ 4000 ಸಾಧು ಸಂತರಿಗೆ ಆಹ್ವಾನ ನೀಡಲಾಗಿದೆ.
ಇವರೊಂದಿಗೆ ಉದ್ಯಮಿ ರತನ್ ಟಾಟಾ, ಮುಕೇಶ್ ಅಂಬಾನಿ, ಗೌತಮ್ ಅದಾನಿ ಸೇರಿದಂತೆ ಅನೇಕ ಉದ್ಯಮಿಗಳು, ಕರಸೇವೆಯಲ್ಲಿ ಬಲಿದಾನ ಮಾಡಿದವರ ಕುಟುಂಬ ಹಾಗೂ ರಾಮಾಯಣ ಧಾರಾವಾಹಿಯಲ್ಲಿ ಪಾತ್ರವಹಿಸಿದ ಅರುಣ್ ಗೋವಿಲ್ ಹಾಗೂ ದೀಪಿಕಾ ಚಿಕ್ಲಿಯಾ ಅವರಿಗೂ ಆಹ್ವಾನ ನೀಡಲಾಗಿದೆ ಎಂದು ಚಂಪತ್ ರಾಯ್ ತಿಳಿಸಿದರು.
