ಪೋಕ್ಸೊ ಕಾಯ್ದೆಯು ಹದಿಹರೆಯದವರ ನಡುವಿನ ಒಮ್ಮತದ ಸಂಬಂಧಗಳನ್ನು ಅಪರಾಧೀಕರಿಸುವ ಉದ್ದೇಶವನ್ನು ಹೊಂದಿಲ್ಲ, ಆದರೆ ಅವರನ್ನು ಅಪರಾಧಳಿಂದ ರಕ್ಷಿಸುವ ಉದ್ದೇಶವನ್ನು ಹೊಂದಿದೆ ಎಂದು ಕರ್ನಾಟಕ ಹೈಕೋರ್ಟ್ ಇತ್ತೀಚೆಗೆ ನಡೆದ ಪ್ರಕರಣದ ತೀರ್ಪಿನ ಸಂದರ್ಭದಲ್ಲಿ ಅಭಿಪ್ರಾಯ ಪಟ್ಟಿದೆ.
ಅಪ್ರಾಪ್ತೆಯನ್ನು ಮದುವೆಯಾದ ಆರೋಪದ ಮೇಲೆ ಭಾರತೀಯ ದಂಡ ಸಂಹಿತೆ, ಪೊಕ್ಸೊ ಕಾಯ್ದೆ ಮತ್ತು ಬಾಲ್ಯ ವಿವಾಹ ನಿಷೇಧ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಸಂಬಂಧ 21 ವರ್ಷದ ಯುವಕನ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ರದ್ದುಪಡಿಸುವ ವೇಳೆ ನ್ಯಾಯಮೂರ್ತಿ ಹೇಮಂತ್ ಚಂದನ್ ಗೌಡರ್ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಆರೋಪಿ ಮತ್ತು ಅಪ್ರಾಪ್ತ ಬಾಲಕಿಗೆ ಈ ಕಾಯ್ದೆಗಳ ಕುರಿತು ಸರಿಯಾದ ಮಾಹಿತಿ ತಿಳಿದಿರುವ ಸಾಧ್ಯತೆ ಇಲ್ಲ ಸಮಾಜದ ಕೆಳ ಸಾಮಾಜಿಕ-ಆರ್ಥಿಕ ವರ್ಗದವರಾಗಿದ್ದು, ಆದ್ದರಿಂದ ಅವರ ಕೃತ್ಯಗಳ ಪರಿಣಾಮಗಳ ಬಗ್ಗೆ ಅವರಿಗೆ ತಿಳಿದಿಲ್ಲ ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿದೆ.
“ಪೊಕ್ಸೊ ಕಾಯ್ದೆಯ ಉದ್ದೇಶವು ಅಪ್ರಾಪ್ತ ವಯಸ್ಕರನ್ನು ದುರುಪಯೋಗದಿಂದ ರಕ್ಷಿಸುವುದಾಗಿದೆ. ಮುಂದೆ ಎದುರಾಗುವ ಪರಿಣಾಮಗಳನ್ನು ತಿಳಿಯದೆ ಒಮ್ಮತದ ಸಂಭೋಗ ನಡೆಸಿದ ಇಬ್ಬರು ಹದಿಹರೆಯದವರ ನಡುವಿನ ಒಮ್ಮತದ ಸಂಬಂಧವನ್ನು ಅಪರಾಧವೆಂದು ಪರಿಗಣಿಸುವುದಿಲ್ಲ” ಎಂದು ನ್ಯಾಯಾಲಯವು ಹೇಳಿದೆ.
ಬೆಂಗಳೂರು ಪೊಲೀಸರ ಪ್ರಕಾರ, ಬಾಲಕಿಗೆ 16 ವರ್ಷ ವಯಸ್ಸಾಗಿದ್ದು, ಆಕೆ ಅಪ್ರಾಪ್ತೆ ಎಂದು ತಿಳಿದಿದ್ದರೂ ಆರೋಪಿ ಮದುವೆಯಾಗಿ ಆಕೆಯೊಂದಿಗೆ ಸಂಬಂಧ ಹೊಂದಿದ್ದ. ಬಾಲಕಿಗೆ ಪ್ರಸ್ತುತ 16 ವರ್ಷ ವಯಸ್ಸಾಗಿದೆ ಎಂದು ತಿಳಿಸಿದ್ದಾರೆ.
ತಾನು ಹುಡುಗಿಯೊಂದಿಗೆ ಸಂಬಂಧ ಹೊಂದಿದ್ದೇನೆ ಮತ್ತು ಎಲ್ಲವೂ ಒಪ್ಪಿಗೆಯೊಂದಿಗೆ ನಡೆದಿವೆ ಎಂಬ ಆಧಾರದ ಮೇಲೆ ಕ್ರಿಮಿನಲ್ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಆರೋಪಿ ಹೈಕೋರ್ಟ್ ಮೊರೆ ಹೋಗಿದ್ದಾನೆ.
ಈ ಸಂಬಂಧ ಸಂತ್ರಸ್ತೆ ಮತ್ತು ಆಕೆಯ ಪೋಷಕರು ಹೈಕೋರ್ಟ್ಗೆ ಜಂಟಿ ಅಫಿಡವಿಟ್ ಸಲ್ಲಿಸಿದ್ದು, ಮದುವೆಯನ್ನು “ಅಜಾಗರೂಕತೆಯಿಂದ” ಮತ್ತು “ಕಾನೂನಿನ ಅಜ್ಞಾನದಿಂದ” ನಡೆಸಲಾಗಿದೆ ಎಂದು ಹೇಳಿದ್ದಾರೆ.
ಕಳೆದ ವರ್ಷ ದಂಪತಿಗೆ ಗಂಡು ಮಗು ಜನಿಸಿತ್ತು ಎಂದು ನ್ಯಾಯಾಲಯಕ್ಕೆ ತಿಳಿಸಲಾಯಿತು. ಬಾಲಕಿ ಮತ್ತು ಹೊಸದಾಗಿ ಹುಟ್ಟಿದ ಮಗು ತಮ್ಮ ಜೀವನೋಪಾಯಕ್ಕಾಗಿ ಆರೋಪಿಯ ಮೇಲೆ ಅವಲಂಬಿತವಾಗಿವೆ. ಆರೋಪಿಯನ್ನು ಜೈಲಿಗೆ ಹಾಕುವುದು ಸಂತ್ರಸ್ತೆ ಮತ್ತು ಆಕೆಯ ಮಗುವಿಗೆ ಹೆಚ್ಚಿನ ದುಃಖವನ್ನು ಉಂಟುಮಾಡುತ್ತದೆ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದ್ದರು.
