ಶಿವಮೊಗ್ಗ : ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತಮ್ಮ ಪುತ್ರ ಕೆ. ಇ. ಕಾಂತೇಶ್ ಅವರಿಗೆ ಹಾವೇರಿ ಕ್ಷೇತ್ರದಿಂದ ಸ್ಪರ್ಧಿಸಲು ಪಕ್ಷದ ಟಿಕೆಟ್ ನಿರಾಕರಿಸಿದ್ದಕ್ಕೆ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರೇ ಕಾರಣ ಎಂದು ಹಿರಿಯ ಬಿಜೆಪಿ ನಾಯಕ ಕೆ . ಎಸ್ . ಈಶ್ವರಪ್ಪ ಆರೋಪಿಸಿದ್ದಾರೆ.
ಇದನ್ನೂ ಓದಿ: Puttila parivara: ಅರುಣ್ ಕುಮಾರ್ ಪುತ್ತಿಲ ಬಿಜೆಪಿ ಸೇರ್ಪಡೆ – ಬಿಜೆಪಿಯೊಂದಿಗೆ ‘ಪುತ್ತಿಲ ಪರಿವಾರ’ ವಿಲೀನ !!
ಬಿಜೆಪಿ ಸಂಸದೀಯ ಮಂಡಳಿಯ ಸದಸ್ಯರಾಗಿರುವ ಯಡಿಯೂರಪ್ಪ ಅವರು ತಮ್ಮ ಮಗನಿಗೆ ಟಿಕೆಟ್ ನೀಡುವ ಭರವಸೆ ನೀಡಿದ್ದರು, ಮಾತ್ರವಲ್ಲದೆ ಮಗನ ಗೆಲುವಿಗಾಗಿ ಪ್ರಚಾರ ಮಾಡುವುದಾಗಿ ಭರವಸೆ ನೀಡಿದ್ದರು ಆದರೆ ಈಗ ಮೋಸ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಬಿಜೆಪಿ ಬುಧವಾರ ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನು ಹಾವೇರಿ ಕ್ಷೇತ್ರದಿಂದ ಕಣಕ್ಕಿಳಿಸಿದೆ. ಬೊಮ್ಮಾಯಿ ಮತ್ತು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಬಿಜೆಪಿ ಟಿಕೆಟ್ ಸಿಗುವಂತೆ, ಯಡಿಯೂರಪ್ಪ ಅವರೇ ಪ್ರಭಾವ ಬೀರಿದ್ದಾರೆ ಎಂದು ಹೇಳಿದರು.
ತಮ್ಮ ಅನುಯಾಯಿಗಳು ಮತ್ತು ಹಿತೈಷಿಗಳು ಶಿವಮೊಗ್ಗ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವಂತೆ ತಮ್ಮ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಹೇಳಿದರು, ಶುಕ್ರವಾರ ಇಲ್ಲಿ ತಮ್ಮ ಬೆಂಬಲಿಗರೊಂದಿಗೆ ಸಭೆ ಕರೆದಿದ್ದು , ನಂತರ ತಮ್ಮ ಮುಂದಿನ ಹೆಜ್ಜೆ ಬಗ್ಗೆ ನಿರ್ಧರಿಸುವುದಾಗಿ ಹೇಳಿದರು .
ಯಡಿಯೂರಪ್ಪ ಅವರ ಪುತ್ರ ಮತ್ತು ಹಾಲಿ ಸಂಸದ ಬಿ ವೈ. ರಾಘವೇಂದ್ರ ಅವರನ್ನು ಪಕ್ಷವು ಮತ್ತೆ ಶಿವಮೊಗ್ಗದಿಂದ ಕಣಕ್ಕಿಳಿಸಿದೆ. ತಾನು ಕಳೆದ 40 ವರ್ಷಗಳಿಂದ ಬಿಜೆಪಿಯಲ್ಲಿದ್ದೇನೆ ಎಂದು ಹೇಳಿದ ಈಶ್ವರಪ್ಪ , ತಾನು ಪ್ರಧಾನಿ ನರೇಂದ್ರ ಮೋದಿಯವರ ಕಟ್ಟಾ ಬೆಂಬಲಿಗನಾಗಿದ್ದೇನೆ ಎಂದು ಪಕ್ಷದ ನಾಯಕರಿಗೆ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ.
