ಫುಡ್ ಆರ್ಡರ್ ಕೊಡಲು ಬಂದಿದ್ದ ಫುಡ್ ಡೆಲಿವರಿ ಬಾಯ್ ಮಹಿಳಾ ಟೆಕ್ಕಿಯ ಕೈ ಹಿಡಿದು ಎಳೆದಾಡಿ ಲೈಂಗಿಕ ದೌರ್ಜನ್ಯ ಎಸಗಿದ್ದು, ಆರೋಪಿ ಆಕಾಶ್ ನನ್ನು ಎಚ್ ಎಎಲ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕಲಬುರ್ಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಆಕಾಶ್, ನಗರದಲ್ಲಿ ಹಲವು ವರ್ಷಗಳಿಂದ ಫುಡ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ. ಆತ ಐಟಿಪಿಎಲ್ ಸಮೀಪದ ಕುಂದಲಹಳ್ಳಿಯ ಪೇಯಿಂಗ್ ಗೆಸ್ಟ್‌ನಲ್ಲಿ ವಾಸವಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: Bank Holiday: ಮಾ.31 ರಂದು ಭಾನುವಾರ ಬ್ಯಾಂಕ್ ಗೆ ರಜೆ ಇಲ್ಲ
ಪ್ರಕರಣದ ಸಂತ್ರಸ್ತೆಯು ಉತ್ತರ ಭಾರತ ಮೂಲದವರಾಗಿದ್ದು, ನಗರದ ಸಾಫ್ಟ್‌ವೇರ್ ಕಂಪನಿಯಲ್ಲಿ ಎಂಜಿನಿಯರ್ ಆಗಿದ್ದಾರೆ. ಎಇಸಿಎಸ್ ಲೇಔಟ್‌ನಲ್ಲಿ ನೆಲೆಸಿರುವ ಅವರು ಮಾ.17ರಂದು ಸಂಜೆ ಆನ್‌ಲೈನ್‌ನಲ್ಲಿ ಫುಡ್ ಆರ್ಡರ್ ಮಾಡಿದ್ದರು. ಅವರ ಮನೆಗೆ ಫುಡ್ ಡೆಲಿವರಿ ಮಾಡಲು ಹೋಗಿದ್ದ ಆಕಾಶ್, ತುರ್ತಾಗಿ ಶೌಚಾಲಯ ಬಳಸುವುದಾಗಿ ಸಂತ್ರಸ್ತೆಗೆ ಕೇಳಿದ್ದ. ಸಂತ್ರಸ್ತೆಯು ಅದಕ್ಕೆ ಸಮ್ಮತಿಸಿದ್ದರು. ಆಕಾಶ್, ಶೌಚಾಲಯದಿಂದ ಹೊರ ಬಂದ ನಂತರ ಕುಡಿಯಲು ನೀರು ಕೇಳಿದ್ದ.
ಇದನ್ನೂ ಓದಿ: Bharat Rice: ಭಾರತ್ ಅಕ್ಕಿ ಈಗ ಮಾಲ್‌ಗಳಲ್ಲೂ ಲಭ್ಯ
ಸಂತ್ರಸ್ತೆಯು ನೀರು ತರಲು ಅಡುಗೆ ಕೋಣೆಗೆ ಹೋಗುತ್ತಿದ್ದಾಗ ಆರೋಪಿಯು ಅವರ ಕೈ ಹಿಡಿದು ಎಳೆದು ಅನುಚಿತವಾಗಿ ವರ್ತಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ. ಆಕಾಶ್ ವರ್ತನೆಯಿಂದ ಗಾಬರಿಯಾದ ಸಂತ್ರಸ್ತೆಯು ಆತನಿಗೆ ಕಪಾಳ ಮೋಕ್ಷಮಾಡಿ, ನೆರವಿಗಾಗಿ ಚೀರಾಡಿದ್ದರು. ಆಗ ಆಕಾಶ್ ಅಲ್ಲಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದ. ಬಳಿಕ ಸಂತ್ರಸ್ತೆಯು ಘಟನೆ ಸಂಬಂಧ ಠಾಣೆಗೆ ದೂರು ನೀಡಿದ್ದರು. ಸಂತ್ರಸ್ತೆಯು ಫುಡ್ ಆರ್ಡರ್ ಮಾಡಿದ್ದ ಕಂಪನಿಯಿಂದ ಆಕಾಶ್‌ನ ಬಗ್ಗೆ ಮಾಹಿತಿ ಕಲೆಹಾಕಿ ಬಂಧಿಸಲಾಯಿತು ಎಂದು ಪೊಲೀಸರು ಮಾಹಿತಿ
ನೀಡಿದ್ದಾರೆ.
