Puttur: ಗಾಯಕಿಯೊಬ್ಬರ ವೈವಾಹಿಕ ಬದುಕಿಗೆ ಸಂಬಂಧಿಸಿ ಯಾವುದೇ ರೀತಿಯ ಸುದ್ದಿ ಪ್ರಕಟಣೆ,ವೀಡಿಯೋ, ಆಡಿಯೋ ಪ್ರಸಾರ ಮಾಡದಂತೆ ಎಲೆಕ್ಟ್ರಾನಿಕ್, ಮುದ್ರಣ, ಸಾಮಾಜಿಕ ಮತ್ತು ವೆಬ್ ಮಾಧ್ಯಮಗಳಿಗೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ.
ತಮ್ಮ ವೈವಾಹಿಕ ಬದುಕಿನ ವಿಚಾರದಲ್ಲಿ ವರದಿಗಳು ಹಾಗೂ ಸಾಮಾಜಿಕ ಜಾಲತಾಣದಲ್ಲಿ ಮಾಡಿರುವ ಫೋಸ್ಟ್‌ಗಳ ಕುರಿತು ತಡೆಯಾಜ್ಞೆ ಕೋರಿ ನ್ಯಾಯವಾದಿ ಮಹೇಶ್ ಕಜೆಯವರ ಮೂಲಕ ಗಾಯಕಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಪುತ್ತೂರಿನ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರಾದ ಪ್ರಕೃತಿ ಕಲ್ಯಾಣ್‌ಪುರ್ ಅವರು ತಡೆಯಾಜ್ಞೆ ನೀಡಿ ಆದೇಶ ಮಾಡಿದ್ದಾರೆ.
ಈ ಪ್ರಕರಣದಲ್ಲಿ ವಿಚ್ಛೇದನ ಪ್ರಕ್ರಿಯೆಯ ವಿಷಯವನ್ನು ಎಲೆಕ್ಟ್ರಾನಿಕ್, ಮುದ್ರಣ ಮತ್ತು ಸಾಮಾಜಿಕ ಮಾಧ್ಯಮಗಳು ನ್ಯಾಯಾಲಯದ ಅನುಮತಿಯಿಲ್ಲದೆ ಪ್ರಕಟಿಸಿವೆ ಮತ್ತು ಅರ್ಜಿದಾರರ ಗೌಪ್ಯತೆಯನ್ನು ಉಲ್ಲಂಘಿಸಿವೆ ಎಂದು ನ್ಯಾಯಾಲಯ ಅಭಿಪ್ರಾಯ ಪಟ್ಟಿದೆ.
ಅಂತಹ ಪ್ರಕಟಣೆಯು ಅರ್ಜಿದಾರರ ಖ್ಯಾತಿ ಮತ್ತು ಭಾವನೆಗಳಿಗೆ ಹಾನಿಯನ್ನುಂಟು ಮಾಡುತ್ತಿದೆ ಎಂದು ಅಭಿಪ್ರಾಯ ಪಟ್ಟಿರುವ ನ್ಯಾಯಾಲಯ, ಈ ವಿಚ್ಛೇದನ ಪ್ರಕ್ರಿಯೆಗೆ ಸಂಬಂಧಿಸಿದಂತೆ ಯಾವುದೇ ಸುದ್ದಿ, ವೀಡಿಯೋ, ಆಡಿಯೋ, ರೀಲ್‌ಗಳು, ವರದಿ, ಲೇಖನ, ಕಮೆಂಟ್‌ಗಳು ಅಥವಾ ಯಾವುದೇ ರೀತಿಯ ಪ್ರಕಟಣೆಯನ್ನು ಪ್ರಕಟಿಸುವಂತಿಲ್ಲ ಮತ್ತು ಎಲ್ಲಾ ಮಾಧ್ಯಮಗಳು ಈಗಾಗಲೇ ಪ್ರಕಟಿಸಿರುವ ಸುದ್ದಿಗಳನ್ನು ತಮ್ಮ ವೆಬ್‌ಸೈಟ್‌ನಿಂದ ಅಳಿಸಲು ಹಾಗೂ ಇತರ ಸುದ್ದಿ, ವೀಡಿಯೋ, ಆಡಿಯೋ, ರೀಲ್‌ಗಳು, ವರದಿ, ಲೇಖನ, ಕಮೆಂಟ್‌ಗಳನ್ನು ಎಲ್ಲಾ ಸಾಮಾಜಿಕ ಜಾಲತಾಣಗಳಿಂದಲೂ ಅಳಿಸಲು ನಿರ್ದೇಶಿಸಿದೆ ಮತ್ತು ಅರ್ಜಿದಾರರ ವಿವರಗಳನ್ನು ಇ-ಕೋರ್ಟ್ ಸ್ಥಿತಿಯಲ್ಲಿ ಮರೆಮಾಡಲು ಕಚೇರಿಗೆ ನಿರ್ದೇಶಿಸಿದೆ.
ಇದನ್ನೂ ಓದಿ:1,000 ಕಿ.ಮೀ. ದೂರದಿಂದಲೇ ರಿಮೋಟ್ ದಾಳಿ: ಕಾರಿನಲ್ಲಿ ಹೋಗುತ್ತಿದ್ದ ಇರಾನ್ ಟಾಪ್ ಸೇನಾ ನಾಯಕ ಹತ್ಯೆ
