Deepika Padukone: 2026ರ ಹಾಲಿವುಡ್ ವಾಕ್ ಆಫ್ ಫೇಮ್ ಪಟ್ಟಿಯಲ್ಲಿ ನಟಿ ದೀಪಿಕಾ ಪಡುಕೋಣೆ ಸ್ಥಾನ ಪಡೆದಿದ್ದಾರೆ. ದೀಪಿಕಾ ಚಲನಚಿತ್ರ ವಿಭಾಗದಲ್ಲಿ 2026ರ ಹಾಲಿವುಡ್ ವಾಕ್ ಆಫ್ ಫೇಮ್ ಕ್ಲಾಸ್ ಪಡೆದ ಮೊದಲ ಭಾರತೀಯ ನಟಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಹಾಲಿವುಡ್ ಚೇಂಬರ್ ಆಫ್ ಕಾಮರ್ಸ್ ಬುಧವಾರ ಈ ಪಟ್ಟಿಯನ್ನು ಪ್ರಕಟಿಸಿದ್ದು, ಇದರಲ್ಲಿ ಪ್ರಪಂಚದಾದ್ಯಂತದ 25 ಪ್ರಸಿದ್ದ ವ್ಯಕ್ತಿಗಳು ಸೇರಿದ್ದಾರೆ.
ದೀಪಿಕಾ ಜೊತೆ, ಇರುವ ನಟರು ಯಾರೂ?
ದೀಪಿಕಾ ಪಡುಕೋಣೆ ಜೊತೆಗೆ ಹಾಲಿವುಡ್ ನಟಿ ಎಮಿಲಿ ಬ್ಲಂಟ್, ಫ್ರೆಂಚ್ ನಟಿ ಕೋಟಿಲ್ಲಾರ್ಡ್, ಕೆನಡಾದ ನಟಿ ರಾಚೆಲ್ ಮ್ಯಾಕ್ ಆಡಮ್ಸ್, ಇಟಾಲಿಯನ್ ನಟ ಫ್ರಾಂಕೊ ನೀರೋ ಮತ್ತು ಸೆಲೆಬ್ರಿಟಿ ಬಾಣಸಿಗ ಗಾರ್ಡನ್ ರಾಮ್ಸೆ ಅವರ ಹೆಸರುಗಳು ಪಟ್ಟಿಯಲ್ಲಿವೆ.
ಹಾಲಿವಡ್ ಚೇಂಬರ್ ಆಫ್ ಕಾಮರ್ಸ್‌ನ ವಾಕ್ ಆಫ್ ಫೇಮ್ ಆಯ್ಕೆ ಸಮಿತಿಯು ಜೂನ್ 20 ರಂದು ನೂರಾರು ಹೆಸರುಗಳಿಂದ 35 ಹೆಸರುಗಳನ್ನು ಆಯ್ಕೆ ಮಾಡಿತು. ನಂತರ ಜೂನ್ 25 ರಂದು ಚೇಂಬರ್‌ನ ನಿರ್ದೇಶಕರ ಮಂಡಳಿಯು ಈ ಪಟ್ಟಿಯನ್ನು ಅನುಮೋದಿಸಿತು. ದೀಪಿಕಾ ಪಡುಕೋಣೆ ಬಹಳ ಹಿಂದಿನಿಂದಲೂ ಟ್ರೆಂಡ್ ಸೆಟ್ಟಿಂಗ್ ನಟಿ ಎಂದು ಪರಿಗಣಿಸಲ್ಪಟ್ಟಿದ್ದಾರೆ. 2018 ರಲ್ಲಿ, ದೀಪಿಕಾ ಅವರನ್ನು ಟೈಮ್ ನಿಯತಕಾಲಿಕೆಯ 100 ಅತ್ಯಂತ ಪ್ರಭಾವಶಾಲಿ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಹೆಸರಿಸಲಾಯಿತು.
ದೀಪಿಕಾ ಪಡುಕೋಣೆ ಅವರು 2017 ರಲ್ಲಿ xXx: ರಿಟರ್ನ್ ಆಫ್ ಕ್ಸಾಂಡರ್ ಕೇಜ್ ಚಿತ್ರದ ಮೂಲಕ ಹಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಈ ಚಿತ್ರದಲ್ಲಿ ದೀಪಿಕಾ ಅವರೊಂದಿಗೆ ವಿನ್ ಡೀಸೆಲ್, ನೀನಾ ಡೊಬ್ರೆವ್, ಡೋನಿ ಯೆನ್, ರೂಬಿ ರೋಸ್ ಮತ್ತು ಸ್ಯಾಮ್ಯುಯೆಲ್ ಎಲ್ ಜಾಕ್ಸನ್ ಮುಂತಾದ ನಟರು ಕಾಣಿಸಿಕೊಂಡಿದ್ದರು.
