Party Donation: ಕೆಲವು ಉದ್ಯಮಿಗಳು, ಖಾಸಗಿ ಕಂಪನಿಗಳು ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವುದು ನಮಗೆಲ್ಲರಿಗೂ ಗೊತ್ತೇ ಇದೆ. ಪಕ್ಷಗಳು ಅಧಿಕಾರಕ್ಕೆ ಬಂದಾಗ ತಮ್ಮ ಬೇಳೆ ಬೇಯಿಸಿಕೊಳ್ಳುವುದು ಇದರ ಒಂದು ಉದ್ದೇಶ. ಇದೀಗ ವೇದಾಂತ ಕಂಪನಿಯು ಬಿಜೆಪಿಗೆ ನೀಡುವ ದೇಣಿಗೆಯನ್ನು ಬರೋಬ್ಬರಿ ನಾಲ್ಕು ಪಟ್ಟು ಹೆಚ್ಚಿಸಿದೆ ಎಂಬ ಮಾಹಿತಿ ಬಂದಿದೆ.

ಹೌದು, ಲಂಡನ್ ಷೇರು ಮಾರುಕಟ್ಟೆಯಲ್ಲಿ ಲಿಸ್ಟಿಂಗ್ ಆಗಿರುವ, ಖ್ಯಾತ ಉದ್ಯಮಿ ಅನಿಲ್ ಅಗರ್ವಾಲ್ ಒಡೆತನದ ವೇದಾಂತ ಲಿಮಿಟೆಡ್ ಗಣಿಗಾರಿಕೆ ಸಂಸ್ಥೆ, ಭಾರೀ ಮೊತ್ತದ ದೇಣಿಗೆಯನ್ನು ಆಡಳಿತ ಪಾರ್ಟಿ ಬಿಜೆಪಿಗೆ ನೀಡಿದೆ. ಆ ಮೂಲಕ, ದೇಣಿಗೆಯ ಮೊತ್ತವನ್ನು ನಾಲ್ಕು ಪಟ್ಟು ಹೆಚ್ಚಿಸಿದೆ. ಈ ಮೂಲಕ ವೇದಾಂತ ಸಂಸ್ಥೆ, ರಾಜಕೀಯ ಪಾರ್ಟಿಗಳಿಗೆ ನೀಡುವ ದೇಣಿಗೆಯ ಮೊತ್ತ 157 ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ. ಇದರಲ್ಲಿ ಬಿಜೆಪಿಯದ್ದೇ ಸಿಂಹಪಾಲು.
ಅಂದಹಾಗೆ ಮಾರ್ಚ್ 2025ಕ್ಕೆ ಕೊನೆಗೊಂಡ ಹಣಕಾಸು ವರ್ಷದ ಬ್ಯಾಲನ್ಸ್ ಶೀಟ್ ನಲ್ಲಿ ವೇದಾಂತ ಸಂಸ್ಥೆ, 97 ಕೋಟಿ ರೂಪಾಯಿ ಬೃಹತ್ ದೇಣಿಗೆಯನ್ನು ಬಿಜೆಪಿಗೆ ನೀಡಿದೆ. ಆ ಮೂಲಕ, ಬಿಜೆಪಿಗೆ ಹರಿದು ಬರುವ ದೇಣಿಗೆ ಮೊತ್ತದಲ್ಲಿ ವೇದಾಂತ ಸಂಸ್ಥೆಯ ಪಾಲು ಬಹುದೊಡ್ಡದಾಗಿದೆ.
