Viral Post : ಮನೆಯಲ್ಲಿ ಕೆಲವರಿಗೆ ಯಾವುದಾದರೂ ಒಂದು ವಸ್ತು ಇಷ್ಟವಾದರೆ ನಿರಂತರವಾಗಿ ಅದನ್ನೇ ಬಳಸುತ್ತಿರುತ್ತಾರೆ. ಅದರೊಂದಿಗೆ ಅವಿನಾಭಾವ ಸಂಬಂಧವನ್ನು ಬೆಳೆಸಿಕೊಳ್ಳುತ್ತಾರೆ. ಅಂತೆಯೇ ಇನ್ನೊಬ್ಬರು ಮಹಿಳೆ ಸುಮಾರು 20 ವರ್ಷಗಳಿಂದಲೂ ಕೂಡ ಒಂದೇ ತಟ್ಟೆಯಲ್ಲಿ ಊಟ ಮಾಡುತ್ತಿದ್ದರು. ಅಷ್ಟೇ ಅಲ್ಲದೆ ಬೇರೆ ಯಾರಿಗೂ ಅದರಲ್ಲಿ ಊಟ ಮಾಡಲು ಅವಕಾಶ ನೀಡುತ್ತಿರಲಿಲ್ಲ. ಇದು ಮನೆಯವರೆಲ್ಲರಿಗೂ ಕೂಡ ಕುತೂಹಲದ ವಿಚಾರವಾಗಿತ್ತು. ಆದರೆ ಇದೀಗ ಆ ಮಹಿಳೆ ಸಾವನ್ನಪ್ಪಿದ್ದು ಆಕೆಯ ಸಾವಿನ ನಂತರ ಆಕೆ ಯಾಕೆ ಹೀಗೆ ಮಾಡುತ್ತಿದ್ದಳು ಎಂಬ ವಿಚಾರ ಬಹಿರಂಗವಾಗಿದೆ.
ತಾಯಿಯ ಸಾವಿನ ಬಳಿಕ ಮಗ ಬಾವುಕ ಪೋಸ್ಟ್ ಅನ್ನು ಹಂಚಿಕೊಂಡಿದ್ದು ಇದು ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. 20 ವರ್ಷಗಳ ಕಾಲ ಕೇವಲ ಒಂದೇ ತಟ್ಟೆಯಲ್ಲಿ ತನ್ನ ತಾಯಿ ಏಕೆ ಊಟ ಮಾಡಿದ್ದರು ಎಂಬುದನ್ನು ಮಗ ತನ್ನ ತಾಯಿಯ ಮರಣದ ನಂತರ ತಿಳಿದುಕೊಂಡಿದ್ದಾನೆ.
ಅಂದಹಾಗೆ ವಿಕ್ರಮ್ ಎಂಬ ದಂತವೈದ್ಯರು ಟ್ವಿಟರ್‌ನಲ್ಲಿ ಒಂದು ತಟ್ಟೆಯ ಚಿತ್ರವನ್ನು ಹಂಚಿಕೊಂಡಿದ್ದಾರೆ. “ಇದು ನನ್ನ ತಾಯಿಯ ತಟ್ಟೆ. ಸುಮಾರು 20 ವರ್ಷಗಳ ಕಾಲ ಇದೇ ತಟ್ಟೆಯಲ್ಲಿ ಅವರು ಊಟ ಮಾಡುತ್ತಿದ್ದರು. ಬೇರೆಯವರು ಯಾರೂ ಈ ತಟ್ಟೆಯಲ್ಲಿ ಊಟ ಮಾಡುವುದನ್ನು ಅವರು ಬಿಡುತ್ತಿರಲಿಲ್ಲ. ನನಗೂ ಮತ್ತು ನನ್ನ ಸಹೋದರಿಗೆ ಮಾತ್ರ ಅದರಲ್ಲಿ ಊಟ ಮಾಡಲು ಅನುಮತಿ ಇತ್ತು” ಎಂದು ಅವರು ಹೇಳಿದ್ದಾರೆ. ದಂತವೈದ್ಯರ ತಾಯಿಗೆ 20 ವರ್ಷಗಳ ಕಾಲ ಇದೇ ತಟ್ಟೆಯಲ್ಲಿ ಊಟ ಮಾಡಲು ಇಷ್ಟವಾಗಲು ಏನು ವಿಶೇಷವಿತ್ತು ಎಂದು ನೀವು ಆಶ್ಚರ್ಯಪಡಬಹುದು” ಎಂದು ಬರೆದುಕೊಂಡಿದ್ದಾರೆ
ಆ ವೈದ್ಯರು ಹೇಳುವಂತೆ, “ನನ್ನ ತಾಯಿಯ ಮರಣದ ನಂತರವೇ, ಇದು ನಾನು ಶಾಲಾ ದಿನಗಳಲ್ಲಿ ಬಹುಮಾನವಾಗಿ ಗೆದ್ದಿದ್ದ ಅದೇ ತಟ್ಟೆ ಎಂದು ನನ್ನ ಸಹೋದರಿಯಿಂದ ತಿಳಿದುಬಂತು. ಅದಕ್ಕಾಗಿಯೇ ತಾಯಿ ತಮ್ಮ ಮಗನ ಈ ತಟ್ಟೆಯಲ್ಲಿ ಬಹಳ ಸಂತೋಷದಿಂದ ಊಟ ಮಾಡುತ್ತಿದ್ದರು.” ಈ ಕಥೆಯು ಮಗುವಿಗೆ ತಾಯಿ ಎಷ್ಟು ವಿಶೇಷ ಮತ್ತು ವಿಶಿಷ್ಟಳು ಎಂಬುದಕ್ಕೆ ಇದು ಸಾಕ್ಷಿಯಾಗಿದೆ.
