Bank: ರಾಷ್ಟ್ರೀಕೃತ ಬ್ಯಾಂಕ್ ಗಳ ಹುದ್ದೆಗಳಿಗೆ ಸ್ಥಳೀಯರ ನೇಮಕವಾದರೆ ಮಾತ್ರ ಉತ್ತಮ ಗ್ರಾಹಕ ಸೇವೆ ನೀಡಲು ಸಾಧ್ಯ ಎಂದು ಕೆನರಾ ಬ್ಯಾಂಕ್ ನಿವೃತ್ತ ಜನರಲ್ ಮ್ಯಾನೇಜರ್ ಡಾ.ಎಸ್.ಟಿ. ರಾಮಚಂದ್ರ ಅಭಿಪ್ರಾಯಿಸಿದ್ದಾರೆ. ಎರಡು ದಶಕಗಳಿಂದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವ ಆಸಕ್ತಿ ಸ್ಥಳೀಯರಲ್ಲಿ ಕ್ಷೀಣಿಸಿರುವುದು ಅತ್ಯಂತ ನೋವಿನ ಸಂಗತಿ. ಪರಿಣಾಮ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಅನ್ಯಭಾಷಿಕರ ಉದ್ಯೋಗಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ.
ಅವರಿಗೆ ಸ್ಥಳೀಯ ಭಾಷಾಜ್ಞಾನ ಇಲ್ಲದ ಕಾರಣ ಗ್ರಾಹಕ ಸೇವೆಗಳಿಗೆ ಭಾರಿ ಹೊಡೆತ ಬಿದ್ದಿದೆ. ಇದೇ ಪರಿಸ್ಥಿತಿ ಮುಂದುವರೆದರೆ ಬ್ಯಾಂಕಿಂಗ್ ಉದ್ಯೋಗ ವಲಯವನ್ನು ಹೊರರಾಜ್ಯದವರೇ ಸಂಪೂರ್ಣವಾಗಿ ಆವರಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ನಮ್ಮ ಮಣ್ಣಿನಲ್ಲಿ ಉದಯವಾದ ಕೆನರಾ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್, ವಿಜಯ ಬ್ಯಾಂಕ್, ಕಾರ್ಪೊರೇಷನ್ ಬ್ಯಾಂಕ್ ಇನ್ನಿತರ ಸಂಸ್ಥೆಗಳು ವಿಲೀನ ಗೊಂಡು ರಾಷ್ಟ್ರಮಟ್ಟದ ಸ್ವರೂಪ ಪಡೆದಿವೆ. ವಿಶೇಷವಾಗಿ ಯಶಸ್ವಿಯಾಗಿ ಮುನ್ನಡೆ ಯುತ್ತಿರುವ ಕೆನರಾ ಬ್ಯಾಂಕ್‌ಗಳಲ್ಲಿ ಹಿಂದೆ ಸಾವಿರಾರು ಕನ್ನಡಿಗರು ಸೇವೆ ಸಲ್ಲಿಸುತ್ತಿದ್ದರು. ಗ್ರಾಹಕ ಸೇವೆಯೂ ಕನ್ನಡದಲ್ಲೇ ನಡೆಯುತ್ತಿತ್ತು. ಆದರೆ ಈಗ ಹಿಂದಿನ ಸ್ಥಳೀಯ ಸೊಗಡು ಹಾಗೂ ಆತ್ಮೀಯ ಸಂವಹನ ಮಾಯವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇತ್ತೀಚಿನ ಬೆಳವಣಿಗೆಗಳು ನಮ್ಮ ಭಾಷಾ ಹಕ್ಕುಗಳ ಜೊತೆಗೆ ಉದ್ಯೋಗಾವಕಾಶಗಳಿಗೂ ಸವಾಲು ಸೃಷ್ಟಿಸಿವೆ. ಹಿಂದಿ, ತೆಲುಗು ಇನ್ನಿತರ ಭಾಷಿಕರ ಸಿಬ್ಬಂದಿ ಗಳೊಂದಿಗೆ ವ್ಯವಹರಿಸಲಾಗದೆ ಕನ್ನಡಿಗರು ಸಂಕಟ ಅನುಭವಿಸುತ್ತಿದ್ದಾರೆ. ಇದು ಕೇವಲ ಸೇವಾ ವ್ಯತ್ಯಯವೆನ್ನಲಾಗದು, ಇದರಿಂದ ಸ್ಥಳೀಯರ ಸ್ವಾಭಿಮಾನಕ್ಕೂ ಧಕ್ಕೆಯಾಗುತ್ತಿದೆ. ಇದು ಪರಿಹಾರವಾಗಬೇಕಾ ದರೆ ಕನ್ನಡದ ಯುವಜನತೆ ಬ್ಯಾಂಕಿಂಗ್ ಕ್ಷೇತ್ರಕ್ಕೆ ಧಾವಿಸಬೇಕು ಎಂದು ಆಶಿಸಿದ್ದಾರೆ.
ಉತ್ತಮ ವೇತನ, ಉದ್ಯೋಗ ಭದ್ರತೆ, ಗೌರವಪೂರ್ಣ ಜೀವನಶೈಲಿಯೊಂದಿಗೆ ಬ್ಯಾಂಕಿಂಗ್ ವಲಯ ಆಕರ್ಷಣೆಯ ವೃತ್ತಿ ಕ್ಷೇತ್ರವಾಗಿಯೇ ಉಳಿದಿದೆ. ಪ್ರಸಕ್ತ ವರ್ಷ ದೇಶದಾದ್ಯಂತ ಸರಿಸುಮಾರು 50,000 ಬ್ಯಾಂಕ್ ಹುದ್ದೆಗಳ ನೇಮಕಾತಿ ನಡೆಯಲಿದೆ. ಅರ್ಹ ಅಭ್ಯರ್ಥಿಗಳು ಐಬಿಪಿಎಸ್, ಎಸ್‌ಬಿಐ, ಆರ್‌ಆರ್‌ಬಿ ಇನ್ನಿತರ ಪರೀಕ್ಷೆಗಳಿಗೆ ಸಜ್ಜಾಗ ಬೇಕು. ಸ್ಪರ್ಧಾತ್ಮಕವಾಗಿ ಹೆಚ್ಚೆಚ್ಚು ಸಂಖ್ಯೆ ಯಲ್ಲಿ ಪರೀಕ್ಷೆ ಎದುರಿಸಬೇಕು. ಇದು ಕೇವಲ ಉದ್ಯೋಗದ ಪ್ರಶ್ನೆ ಅಲ್ಲ. ಇದು ನಮ್ಮ ಭಾಷೆಯ ಅಸ್ತಿತ್ವದ ಪ್ರಶ್ನೆಯೂ ಆಗಿದೆ. ಬ್ಯಾಂಕ್‌ಗಳಲ್ಲಿ ಮತ್ತೆ ಕನ್ನಡದ ಧ್ವನಿ ಝೇಂಕರಿಸಬೇಕಾ ದರೆ ಕನ್ನಡದ ಯುವ ಮನಸ್ಸುಗಳು ಸಾಧನೆ ಮೆರೆಯಬೇಕು ಎಂದು ನುಡಿದಿದ್ದಾರೆ.
