Mangalore: ಹಿಂದೂ ಕಾರ್ಯಕರ್ತರ ಹತ್ಯೆ, ಡ್ರಗ್ಸ್ ಮಾಫಿಯಾ, ಭಟ್ಕಳ, ಕಾಸರಗೋಡು ಸೇರಿದಂತೆ ಕರಾವಳಿ ಭಾಗದಲ್ಲಿ ಉಗ್ರ ಚಟುವಟಿಕೆಯ ಸ್ಲೀಪರ್ ಸೆಲ್‌ಗಳ ಆತಂಕದ ಹಿನ್ನಲೆಯಲ್ಲಿ ಮಂಗಳೂರಿನಲ್ಲಿ ಆದಷ್ಟು ಬೇಗ ರಾಷ್ಟ್ರೀಯ ತನಿಖಾ ದಳ(NIA)ದ ಕಚೇರಿ ಸ್ಥಾಪಿಸಬೇಕೆಂದು ಕೋರಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ದಕ್ಷಿಣ ಕನ್ನಡ ಸಂಸದ ಕ್ಯಾ.ಬ್ರಿಜೇಶ್ ಚೌಟ ಮನವಿ ಸಲ್ಲಿಸಿದ್ದಾರೆ.
ದೆಹಲಿಯಲ್ಲಿ ಗೃಹ ಸಚಿವ ಅಮಿತ್ ಶಾ ಅವರ ಕಚೇರಿಯಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ ಚೌಟ ಅವರು, ಮಂಗಳೂರು ತನ್ನ ಸೂಕ್ಷ್ಮ ಭೌಗೋಳಿಕ ಸ್ಥಾನದಿಂದಾಗಿ, ಮತ್ತು ಭಟ್ಕಳ, ಕಾಸರಗೋಡಿನಂತಹ ಉಗ್ರ ಚಟುವಟಿಕೆಗಳ ಕೇಂದ್ರಗಳಿಗೆ ಹತ್ತಿರವಿರುವುದರಿಂದ, ರಾಷ್ಟ್ರ ವಿರೋಧಿ ಶಕ್ತಿಗಳು ತಮ್ಮ ವಕ್ರ ದೃಷ್ಟಿ ಬೀರಿರುವುದಕ್ಕೆ ಕೆಲವೊಂದು ಘಟನೆಗಳು ಸಾಕ್ಷಿಯಾಗಿವೆ. ಅಲ್ಲದೆ ನಿಷೇಧಿತ ಪಿಎಫ್‌ಐ ಸಂಘಟನೆ ರಾಜಕೀಯ ಮುಖವಾಣಿ ಎಸ್‌ಡಿಪಿಐ ತನ್ನ ಮೂಲಕ ಹೊಸ ರೂಪ ತಳೆದು ಮುಂದುವರಿದಿರುವುದು ಮಾತ್ರವಲ್ಲದೇ, ಪ್ರಜಾಪ್ರಭುತ್ವದ ವೇದಿಕೆಗಳನ್ನು ಬಳಸಿಕೊಂಡು ತಮ್ಮ ಮೂಲಭೂತವಾದಿ, ಅಜೆಂಡಾಗಳನ್ನು ಮುಂದುವರೆಸುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯಲ್ಲಿ ಭಯೋತ್ಪಾದನೆಗೆ ಸಂಬಂಧಿಸಿದ ಬಂಧನಗಳು ಮತ್ತು ಚಟುವಟಿಕೆಗಳು ಕಳೆದ 10 ವರ್ಷಗಳಲ್ಲಿ ಹೆಚ್ಚಾಗಿದೆ. ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ನಿಷೇಧಿತ ಪಿಎಫ್‌ಐ ಸಂಘಟನೆಯ ಪ್ರಮುಖ ಸದಸ್ಯರು ಸೇರಿದಂತೆ ಒಟ್ಟು 21 ಆರೋಪಿಗಳನ್ನು ಎನ್‌ಐಎ ತನಿಖಾಧಿಕಾರಿಗಳು ಈಗಾಗಲೇ ಬಂಧಿಸಿದ್ದಾರೆ. ಪಿಎಫ್‌ಐ ಸಂಘಟನೆಯ ಗುಪ್ತ ಭಾಗವಾಗಿದ್ದ ಸರ್ವೀಸ್ ಟೀಂನ ಅಸ್ತಿತ್ವ, ರಹಸ್ಯ ಸಭೆಗಳು, ತರಬೇತಿ ಕೇಂದ್ರದ ಬಗ್ಗೆಯೂ ಎನ್‌ಐಎ ತನಿಖೆಗಳು ಬೆಳಕುಚೆಲ್ಲಿತ್ತು. ಹೀಗಿರುವಾಗ, ಮಂಗಳೂರಿನಲ್ಲಿ ಎನ್‌ಐಎ ಕಚೇರಿ ಆರಂಭಿಸುವ ಅಗತ್ಯತೆಯನ್ನು ಕ್ಯಾ. ಚೌಟ ಅವರು ಗೃಹ ಸಚಿವರಿಗೆ ಮನವರಿಕೆ ಮಾಡಿದ್ದಾರೆ.
