Crime: ಐದು ವರ್ಷದ ಬಾಲಕಿಯ ಮೇಲೆ ಮಸೀದಿಯ ಮೌಲ್ವಿಯೇ ಅತ್ಯಾಚಾರ ನಡೆಸಿರುವ ಘಟನೆ ಬೆಳಗಾವಿಯಲ್ಲಿ (Belagavi Crime) ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. 2023 ರ ಅಕ್ಟೋಬರ್ ನಲ್ಲಿ ನಡೆದಿದ್ದ ಈ ಘಟನೆ ಈಗ ಹೊರಬಿದ್ದಿದ್ದು, ಕೃತ್ಯದ ಸಿಸಿಟಿವಿ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಮಹಾಲಿಂಗಪುರದ ತುಫೇಲ್ ಅಹ್ಮದ್ ದಾದಾಫೀರ್(22) ಅತ್ಯಾಚಾರವೆಸಗಿದ ಆರೋಪಿಯಾಗಿದ್ದಾನೆ. ಈತನ ವಿರುದ್ಧ ಆರೋಪ ಕೇಳಿಬಂದಿದ್ದರೂ ಸಹ ಭಯದಿಂದಾಗಿ ಪೋಷಕರು ದೂರು ನೀಡಲು ಹಿಂದೇಟು ಹಾಕಿದ್ದರು.
ಈ ಪ್ರಕರಣ ಬಹುತೇಕ ಮುಚ್ಚಿ ಹೋಗುವುದರಲ್ಲಿತ್ತು. ಪ್ರಭಾವಿಗಳ ಬೆದರಿಕೆಯಿಂದಾಗಿ ಪೋಷಕರೂ ಸಹ ದೂರು ದಾಖಲಿಸಲು ಹಿಂದೇಟು ಹಾಕಿದ್ದರೆನ್ನಲಾಗಿದೆ. ಕೊನೆಗೆ ಸ್ಥಳೀಯ ನಾಯಕರೊಬ್ಬರ ಬೆಂಬಲದಿಂದ ಹಿಂದೂ ಸಂಘಟನೆಯ ಮುಖಂಡರೊಬ್ಬರನ್ನು ಸಂಪರ್ಕಿಸಿದ ಪೋಷಕರು ಫೋನ್ ನಲ್ಲಿ ತಮ್ಮ ಸಮಸ್ಯೆ ಹೇಳಿಕೊಂಡಿದ್ದರು. ಈ ಕರೆಯನ್ನು ರೆಕಾರ್ಡ್ ಮಾಡಿಕೊಂಡಿದ್ದ ಹಿಂದೂ ಸಂಘಟನೆಯ ಮುಖಂಡ ಅದನ್ನು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಸಮೇತ ಬಹಿರಂಗಪಡಿಸಿದ್ದು, ಪೊಲೀಸರು ಈಗ ದೂರು ದಾಖಲಿಸಿಕೊಂಡಿದ್ದಾರೆ.
ಸದ್ಯ ಆರೋಪಿಯನ್ನು ಬಂಧಿಸಿ ಹಿಂಡಲಗಾ ಜೈಲಿಗೆ ಸ್ಥಳಾಂತರಿಸಿರುವ ಮುರಗೋಡ ಠಾಣೆಯ ಪೊಲೀಸರು ಫೋಕ್ಲೋ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
