Modi Gift: ಬೆಂಗಳೂರು ಮೆಟ್ರೋದ 3ನೇ ಹಂತದ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬೆಳ್ಳಿ ಗಣೇಶನ ವಿಗ್ರಹವನ್ನು ನೀಡಿ ಸಂತಸಪಟ್ಟರು. ಆದರೆ ಈ ಗಿಫ್ಟ್ ಬಿಜೆಪಿ ಶಾಸಕರು ತಂದಿದ್ದರು ಎಂದು ವರದಿಯಾಗಿದೆ. ಬಿಜೆಪಿ ಶಾಸಕ ಎಂ.ಕೃಷ್ಣಪ್ಪ ತಾವು ಮೋದಿಜೀಗೆ ಗಿಫ್ಟ್ ಕೊಡಲೆಂದು ತಂದಿದ್ದ ಗಣೇಶ ವಿಗ್ರಹವನ್ನು SPG ಸಿಬ್ಬಂದಿ ತಪಾಸಣೆ ನಡೆಸಿ ಟೇಬಲ್ ಮೇಲೆ ಇಟ್ಟಿದ್ದರು. ಅದನ್ನು ಡಿ.ಕೆ. ಶಿವಕುಮಾರ್ ಅವರು ಅದೇ ವಿಗ್ರಹವನ್ನು ವೇದಿಕೆಯ ಮೇಲೆ ಪ್ರಧಾನಿ ಮೋದಿಗೆ ನೀಡಿದ್ದಾರೆ ಎಂದು ವರದಿ ಹೇಳಿದೆ.
ಡಿ.ಕೆ. ಶಿವಕುಮಾರ್ ಸ್ವತಃ ತಮ್ಮದೇ ಎಂಬಂತೆ ಕೊಂಡೊಯ್ದು ಪ್ರಧಾನಿಗೆ ನೀಡಿ ಔದಾರ್ಯತೆ ಮೆರೆದಿದ್ದಾರೆ. ಬೆಂಗಳೂರು ದಕ್ಷಿಣ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಶಾಸಕ ಎಂ. ಕೃಷ್ಣಪ್ಪ ಪ್ರಧಾನಿ ನರೇಂದ್ರ ಮೋದಿ ಭೇಟಿಗೆ ಅತ್ಯುತ್ಸಾಹದಿಂದ ಬಂದಿದ್ದರು. ಈ ವೇಳೆ ಪ್ರಧಾನಿ ನರೇಂದ್ರ ಮೋದಿಯವರ ಭದ್ರತಾ ಪಡೆ ಈ ವಿಗ್ರಹವನ್ನು ಪರಿಶೀಲನೆಗೊಳಪಡಿಸಿತ್ತು. ತಪಾಸಣೆಯ ಬಳಿಕ ವಿಗ್ರಹವನ್ನು ಒಳಗೆ ಕೊಂಡೊಯ್ಯಲು ಅನುಮತಿ ನೀಡಲಾಗುವುದು ಎಂದು ಸಿಬ್ಬಂದಿ ಹೇಳಿದ್ದರು. ತಪಾಸಣೆಯ ಬಳಿಕ ಎಸ್‌ಪಿಜಿ ಸಿಬ್ಬಂದಿ ವಿಗ್ರಹವನ್ನು ಮೇಜಿನ ಮೇಲೆ ಇರಿಸಿದ್ದರು.
ಈ ವೇಳೆ ಕಾರ್ಯಕ್ರಮಕ್ಕೆ ಆಗಮಿಸಿದ ಡಿ.ಕೆ. ಶಿವಕುಮಾರ್ ಆರಾಮವಾಗಿ ಬೆಳ್ಳಿಯ ಗಣೇಶನನ್ನು ಮೇಜಿನ ಮೇಲಿಂದ ಎಸ್ಕೇಪ್ ಮಾಡಿ ಅದನ್ನು ಪ್ರಧಾನಿ ನರೇಂದ್ರ ಮೋದಿಗೆ ಉಡಗೊರೆಯಾಗಿ ನೀಡಿ ಹೆಮ್ಮೆಯಿಂದ ಬೀಗಿದರು. ಅಲ್ಲದೇ ಆ ವಿಗ್ರಹವನ್ನು ಉಡುಗೊರೆಯಾಗಿ ನೀಡುತ್ತಿರುವಾಗ ಬಾಯ್ತುಂಬಾ ನಗುತ್ತಾ ಫೋಟೋಗಳಿಗೂ ಫೋಸು ನೀಡಿದ್ದಾರೆ. ಈ ದೃಶ್ಯವನ್ನು ಕಣ್ಣುಂಬಿಕೊಂಡ ಬಿಜೆಪಿ ಶಾಸಕ ಎಂ. ಕೃಷ್ಣಪ್ಪ ಕೈಕೈ ಹಿಸುಕಿಕೊಂಡು ಪೆಚ್ಚುಮೋರೆ ಹಾಕೊಂಡು ಹಿಂದಿರುಗಿದ್ದಾರೆ.
