BJP Game plan: ಒಳ ಮೀಸಲಾತಿ ಹಾಗೂ ಕರ್ನಾಟಕ ಕಾಂಗ್ರೆಸ್ ನಲ್ಲಿನ ಅಧಿಕಾರ ಹಸ್ತಾಂತರದ ರಾಜ ಕೀಯ ವಿದ್ಯಮಾನಗಳ ಕುರಿತು ಕೈಗಾರಿಕಾ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರಿಂದ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾಹಿತಿ ಪಡೆದಿದ್ದಾರೆ.
ಕುಮಾರಸ್ವಾಮಿ ಅವರನ್ನು ತಮ್ಮ ಕಚೇರಿಗೆ ಕರೆಸಿಕೊಂಡ ಅಮಿತ್ ಶಾ, ಸುದೀರ್ಘ ಚರ್ಚೆ ನಡೆಸಿದರು. ಸೆಪ್ಟೆಂಬರ್-ನವೆಂಬರ್ ವೇಳೆಗೆ ರಾಜ್ಯ ಕಾಂಗ್ರೆಸ್ ನಾಯಕತ್ವದಲ್ಲಿ ಬದಲಾವಣೆ ಲಕ್ಷಣಗಳು ಕಂಡುಬರುತ್ತಿದ್ದು, ಇಂತಹ ಸನ್ನಿವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವಯಂಪ್ರೇರಿತವಾಗಿ ಅಧಿಕಾರ ಬಿಟ್ಟುಕೊಡುವರೆ. ಅವರು ಸಿದ್ಧರಿದ್ದರೂ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಹುದ್ದೆಗೇರಲು ಸಿದ್ದರಾಮಯ್ಯ ಬಣ ಬೆಂಬಲಿಸುವುದೇ. ಒಂದು ವೇಳೆ ಶಿವಕುಮಾರ್ ವಿರೋಧಿ ಗುಂಪು ಹೊರಬಂದರೆ, ಉದ್ಭವಿ ಸುವ ಪರಿಸ್ಥಿತಿಯಲ್ಲಿ ಪರ್ಯಾಯ ಸರ್ಕಾರ ರಚನೆ ಸಾಧ್ಯಾಸಾಧ್ಯತೆ ಬಗ್ಗೆ ಮಾಹಿತಿ ಪಡೆದಿದ್ದಾರೆ.
ಸಚಿವ ಸತೀಶ್ ಜಾರಕಿ ಹೊಳಿ ಸೇರಿದಂತೆ ಕೆಲವರು ನಿಮ್ಮ ಸಂಪರ್ಕದಲ್ಲಿದ್ದಾರೆ. ಅವರ ಮುಂದಿನ ನಿಲುವೇನು. ಅಧಿಕಾರ ಹಸ್ತಾಂತರ ಆದಲ್ಲಿ, ಇವರುಗಳ ಪಾತ್ರವೇನು ಎಂಬ ಮಾಹಿತಿ ಪಡೆದಿದ್ದಾರೆ. ಜೊತೆಗೆ ಕರ್ನಾಟಕದಲ್ಲಿ ಒಳ ಮೀಸಲಾತಿ ಜಾರಿಯಿಂದ ಕಾಂಗ್ರೆಸ್‌ಗೆ ರಾಜಕೀಯ ಲಾಭ ತರಲಿದೆಯೇ? ಸಮುದಾಯದ ಇತರ ಒಳ ಪಂಗಡಗಳು ಸರ್ಕಾರದ ತೀರ್ಮಾನ ಒಪ್ಪುತ್ತವೆಯೇ? ಎಡಗೈ, ಲಂಬಾಣಿ ಹಾಗೂ ಬೋವಿ ಸೇರಿದಂತೆ ಇತರೆ ಸಣ್ಣಪುಟ್ಟ ಸಮು ದಾಯಗಳು ಕರ್ನಾಟಕದಲ್ಲಿ ಬಿಜೆಪಿ ಬೆಂಬಲಿಸಿಕೊಂಡು ಬಂದಿವೆ.
ಬಲಗೈ ಸಮುದಾಯ ಮಾತ್ರ ಅಂದಿನಿಂದ ಕಾಂಗ್ರೆಸ್ ಜೊತೆಯೇ ಇದೆ. ಪರಿಶಿಷ್ಟ ಜಾತಿಯಲ್ಲಿನ 103 ಪಂಗಡಗಳು, ಒಳ ಮೀಸಲಾತಿ ನಿರ್ಧಾರಕ್ಕೆ ಸಮ್ಮತಿಸಲಿವೆಯೇ ಎಂಬ ಮಾಹಿತಿ ಕೇಳಿದ್ದಾರೆ. ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ವರಿಷ್ಠರ ನಡುವೆ ಉಂಟಾಗಿರುವ ಕಂದಕದ ಬಗ್ಗೆ ಮಾಹಿತಿ ನೀಡಿರುವುದಲ್ಲದೆ ಎಐಸಿಸಿಯ ಯಾವುದೇ ನಾಯಕರು ಮುಖ್ಯಮಂತ್ರಿ ಪರ ಇಲ್ಲ. ಮುಖ್ಯಮಂತ್ರಿ ಆಪ್ತ ಕೆ.ಎನ್. ರಾಜಣ್ಣ ಅವರನ್ನು ಸಂಪುಟದಿಂದ ವಜಾ ಗೊಳಿಸುವಂತಹ ಎಐಸಿಸಿಯ ಕಠಿಣ ತೀರ್ಮಾನಕ್ಕೆ ಸಿದ್ದರಾಮಯ್ಯ ತಲೆಬಾಗಲೇ ಬೇಕಾಯಿತು. ರಾಜಣ್ಣ ಅವರನ್ನು ಉಳಿಸಿಕೊಳ್ಳಲು ಸಿದ್ದರಾಮಯ್ಯ ನಡೆಸಿದ ಯತ್ನ ಕೊನೆವರೆಗೂ ಫಲ ನೀಡಲಿಲ್ಲ.
ಸಿದ್ದರಾಮಯ್ಯ ಬೆಂಬಲಿಗರಿಗೂ ಅಧಿಕಾರ ಹಸ್ತಾಂತರದ ಮನವರಿಕೆ ಆಗಿದೆ. ಈ ಬಣ ಶಿವಕುಮಾರ್ ಅವರನ್ನು ಯಾವುದೇ ಕಾರಣಕ್ಕೂ ಬೆಂಬಲಿಸುವುದಿಲ್ಲ ಎಂಬ ಸಂದೇಶ ನೀಡಿದ್ದಾರೆ. ಈ ನಡುವೆ ದಲಿತ ಸಮುದಾಯ ಮುಖ್ಯಮಂತ್ರಿ ಹುದ್ದೆಗಾಗಿ ಬೇಡಿಕೆ ಇಟ್ಟಿರುವ ಎಲ್ಲಾ ಮಾಹಿತಿಯನ್ನು ಶಾ ಅವರಿಗೆ ಕುಮಾರಸ್ವಾಮಿ ವಿವರಿಸಿದ್ದಾರೆ. ರಾಜ್ಯ ಬಿಜೆಪಿ ನಾಯಕತ್ವಕ್ಕೂ ಸಂಬಂಧಿಸಿದಂತೆ ಕೆಲವು ವಿವರವನ್ನು ಅಮಿತ್ ಶಾ ಪಡೆದಿದ್ದಾರೆ.
ಇತ್ತೀಚೆಗೆ ಅಮಿತ್ ಶಾ, ಕರ್ನಾಟಕ ರಾಜಕಾರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಅವರಿಂದಲೂ ಮಾಹಿತಿ ಪಡೆದಿದ್ದನ್ನು ಸ್ಮರಿಸಬಹುದು.
ಅಮಿತ್ ಶಾ ಭೇಟಿ ನಂತರ ಕುಮಾರಸ್ವಾಮಿ ಟ್ವಿಟ್ ಮಾಡಿ, ರಾಜ್ಯ ಮತ್ತು ರಾಷ್ಟ್ರಕ್ಕೆ ಸಂಬಂಧಿಸಿದ ಮಹತ್ವದ ವಿಷಯಗಳು ಹಾಗೂ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆಯುತ್ತಿರುವ ಅಭಿವೃದ್ಧಿಗಳ ಬಗ್ಗೆ ಕೇಂದ್ರ ಗೃಹ ಸಚಿವರ ಜೊತೆ ಚರ್ಚಿಸಿದೆ. ಅಭಿವೃದ್ಧಿ ಪಥದಲ್ಲಿ ಶಾ ಮಾರ್ಗದರ್ಶನ ಮತ್ತು ಬೆಂಬಲ ಅತ್ಯಂತ ಮೌಲ್ಯಯುತವಾಗಿದೆ ಎಂದಿದ್ದಾರೆ.
