Home » Bihar: ಊರಿಗೆ ಬಂದ ಸಚಿವರು, ಶಾಸಕರ ಮೇಲೆ ಗ್ರಾಮಸ್ಥರಿಂದ ಹಲ್ಲೆ – 1 ಕಿ. ಮೀ ಓಡಿ ಜೀವ ಉಳಿಸಿಕೊಂಡ ನಾಯಕರು!!

Bihar: ಊರಿಗೆ ಬಂದ ಸಚಿವರು, ಶಾಸಕರ ಮೇಲೆ ಗ್ರಾಮಸ್ಥರಿಂದ ಹಲ್ಲೆ – 1 ಕಿ. ಮೀ ಓಡಿ ಜೀವ ಉಳಿಸಿಕೊಂಡ ನಾಯಕರು!!

0 comments

Bihar: ಬಿಹಾರದ ಗ್ರಾಮ ಒಂದಕ್ಕೆ ಬಂದ ಅಲ್ಲಿನ ಸಚಿವರು ಹಾಗೂ ಶಾಸಕರ ಮೇಲೆ ಗ್ರಾಮಸ್ಥರು ಹಲ್ಲೆ ನಡೆಸಿದ್ದು ಸುಮಾರು ಒಂದು ಕಿಲೋಮೀಟರ್ ವರೆಗೂ ಓಡಿಸಿಕೊಂಡು ಹೋಗಿರುವ ಘಟನೆ ನಡೆದಿದೆ.

ಹೌದು, ಆಗಸ್ಟ್‌ 23ರಂದು ಗಂಗಾ ನದಿಯಲ್ಲಿ ಪವಿತ್ರ ಸ್ನಾನ ಮಾಡಲು ಹೋಗುತ್ತಿದ್ದ ಭಕ್ತರನ್ನೊಳಗೊಂಡ ಆಟೋರಿಕ್ಷಾಕ್ಕೆ ನಳಂದದಲ್ಲಿ ಟ್ರಕ್‌ ಡಿಕ್ಕಿ ಹೊಡೆದು 8 ಮಹಿಳೆಯರು ಸೇರಿದಂತೆ ಕನಿಷ್ಠ 9 ಜನರು ಮೃತಪಟ್ಟಿದ್ದರು. ಈ ಸಂತ್ರಸ್ತರ ಕುಟುಂಬವನ್ನು ಭೇಟಿಯಾಗಿ ಸಾಂತ್ವನ ಹೇಳಲು ಬುಧವಾರ ಗ್ರಾಮೀಣಾಭಿವೃದ್ಧಿ ಸಚಿವ ಶ್ರವಣ್ ಕುಮಾರ್ ಮತ್ತು ಹಿಲ್ಸಾ ಶಾಸಕ ಕೃಷ್ಣ ಮುರಾರಿ ಅಲಿಯಾಸ್ ಪ್ರೇಮ್ ಮುಖಿಯಾ ಅವರು ಇಬ್ಬರೂ ಬಂದಿದ್ದರು. ಈ ವೇಳೆ ಅವರ ಮೇಲೆ ಗ್ರಾಮಸ್ಥರು ಹಠಾತ್ತನೆ ಹಲ್ಲೆ ನಡೆಸಿದ್ದಾರೆ. ಜೀವ ಉಳಿಸಿಕೊಳ್ಳಲು ಸಚಿವರು ಮತ್ತು ಶಾಸಕರು ಸುಮಾರು 1 ಕಿಲೋಮೀಟರ್ ಓಡಬೇಕಾಯಿತು.

ಈ ವೇಳೆ ಗ್ರಾಮಸ್ಥರು ಸಂತ್ರಸ್ತರ ಕುಟುಂಬಗಳಿಗೆ ಪರಿಹಾರ ಧನ ನೀಡುವಂತೆ ಆಗ್ರಹಿಸಿದರು. ಇದನ್ನು ನಂತರ ಚರ್ಚಿಸಲಾಗುವುದು ಎಂದು ಸಚಿವರು ಉತ್ತರಿಸಿದಾಗ, ಸ್ಥಳೀಯರ ಕೋಪ ಭುಗಿಲೆದ್ದಿತು. ಬಿದಿರಿನ ಕೋಲು ಮತ್ತು ಕಲ್ಲುಗಳನ್ನು ಹಿಡಿದು ನೂರಾರು ಗ್ರಾಮಸ್ಥರು ಸಚಿವರು ಮತ್ತು ಶಾಸಕರನ್ನು ಸುಮಾರು 1 ಕಿ.ಮೀ. ದೂರ ಬೆನ್ನಟ್ಟಿದರು. ಈ ವೇಳೆ ಸಚಿವರು 3 ಬಾರಿ ಕಾರುಗಳನ್ನು ಬದಲಾಯಿಸಬೇಕಾಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಗ್ರಾಮಸ್ಥರಿಂದ ತಪ್ಪಿಸಿಕೊಳ್ಳಲು ಸಚಿವ ಮತ್ತು ಶಾಸಕ ಓಡುತ್ತಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ.

Viral Video : ಸಾಕಿದ ಮೇಕೆಯನ್ನು ಹೊತ್ತಯ್ಯಲು ಬಂದ ಸಿಂಹ – ಚೊಂಬಲ್ಲಿ ತಲೆಗೆ ಕುಟ್ಟಿ ಓಡಿಸಿದ ಮುದುಕಿ

You may also like