ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ವಿವಿಧ ವಸತಿ ಗೃಹಗಳಲ್ಲಿ 2006 ರಿಂದ 2010 ರ ಅವಧಿಯಲ್ಲಿ ಸಂಭವಿಸಿದ 4 ಅಪರಿಚಿತ ಸಾವುಗಳ ಕುರಿತು ಗಂಭೀರ ಆರೋಪಗಳು ಕೇಳಿಬಂದಿದ್ದು, ಇವು ಸಂಭಾವ್ಯ ಕೊಲೆ ಪ್ರಕರಣಗಳಾಗಿರುವ ಸಾಧ್ಯತೆ ಹೆಚ್ಚಿರುವುದರಿಂದ ವಿಶೇಷ ತನಿಖಾ ದಳ (SIT) ಯು ಈ ಬಗ್ಗೆ ತಕ್ಷಣ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸುವಂತೆ ಸೌಜನ್ಯ ಹೋರಾಟಗಾರ ಮಹೇಶ ಶೆಟ್ಟಿ ತಿಮರೋಡಿ ಬೆಳ್ತಂಗಡಿಯ ಎಸ್.ಐ.ಟಿ ಕಚೇರಿಗೆ ತೆರಳಿ ದೂರು ನೀಡಿದ್ದಾರೆ.
ನಿನ್ನೆ, ಗುರುವಾರ ರಾತ್ರಿ ಅವರು ಬೆಳ್ತಂಗಡಿ ಎಸ್ ಐ ಟಿ ಕಚೇರಿಗೆ ಭೇಟಿ ನೀಡಿದ್ದು, ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದ ದಾಖಲೆಗಳನ್ನು ಆಧರಿಸಿ ಈ ದೂರನ್ನು ನೀಡಿದ್ದಾರೆ. ಜತೆಗೆ ಮಾಹಿತಿ ಹಕ್ಕಿನಲ್ಲಿ ಪಡೆದಿದ್ದ ದಾಖಲೆಗಳನ್ನು ಕೂಡಾ ನೀಡಿರುವುದಾಗಿ ವರದಿಯಾಗಿದೆ.
ತಿಮರೋಡಿ ನೀಡಿರುವ ದೂರಿನಲ್ಲಿ ಧರ್ಮಸ್ಥಳದ ಗಾಯತ್ರಿ, ಶರಾವತಿ ಮತ್ತು ವೈಶಾಲಿ ವಸತಿ ಗೃಹಗಳಲ್ಲಿ ನಡೆದ ನಾಲ್ಕು ಸಾವುಗಳನ್ನು ಪ್ರಸ್ತಾಪಿಸಲಾಗಿದೆ. ಈ ಮರಣಗಳನ್ನು “ಅಪರಿಚಿತ ಶವ”ಗಳೆಂದು ಘೋಷಿಸಿ ಅಲ್ಲಿನ ಗ್ರಾಮ ಪಂಚಾಯತ್ ಮೂಲಕ ತರಾತುರಿಯಲ್ಲಿ ಸಮಾಧಿ ಮಾಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಈ ಪ್ರಕರಣಗಳಲ್ಲಿ ಕೇವಲ ಅಸ್ವಾಭಾವಿಕ ಮರಣ ವರದಿ (UDR) ಎಂದು ಮಾತ್ರ ದಾಖಲಿಸಲಾಗಿದ್ದು, ಇವುಗಳ ಬಗ್ಗೆ ಹತ್ಯೆ ಅಥವಾ ಆತ್ಮಹತ್ಯೆಯ ಸಂಶಯವಿದ್ದರೂ ಕೂಡಾ ಎಫ್.ಐ.ಆರ್ ದಾಖಲಿಸದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ಮಹೇಶ್ ಶೆಟ್ಟಿ ತಿಮರೋಡಿ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ ಎಂದು ವರದಿಯಾಗಿದೆ.
