Home » High Court: ಬಾನು ಮುಷ್ತಾಕ್ ದಸರಾ ಉದ್ಘಾಟಿಸಲು ವಿರೋಧ – ಪ್ರತಾಪ್ ಸಿಂಹ ಅರ್ಜಿ ವಜಾಗೊಳಿಸಿದ ಹೈಕೋರ್ಟ್!!

High Court: ಬಾನು ಮುಷ್ತಾಕ್ ದಸರಾ ಉದ್ಘಾಟಿಸಲು ವಿರೋಧ – ಪ್ರತಾಪ್ ಸಿಂಹ ಅರ್ಜಿ ವಜಾಗೊಳಿಸಿದ ಹೈಕೋರ್ಟ್!!

0 comments

High Court : ದಸರಾ (Dasara) ಉದ್ಘಾಟನೆಗೆ ಬೂಕರ್ ಪ್ರಶಸ್ತಿ ವಿಜೇತೆ ಲೇಖಕಿ ಬಾನು ಮುಷ್ತಾಕ್ (Banu Mushtaq) ಆಯ್ಕೆಗೆ ವಿರೋಧ ವ್ಯಕ್ತಪಡಿಸಿ ಬಿಜೆಪಿ ನಾಯಕ ಪ್ರತಾಪ್ ಸಿಂಹ (Pratap Simha) ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಸೋಮವಾರ ವಜಾಗೊಳಿಸಿದೆ.

ಹೌದು, ಇಂದು ಹೈಕೋರ್ಟ್ ನಲ್ಲಿ ಪ್ರತಾಪ್ ಸಿಂಹ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಯಿತು. ಬಖ್ರು ಹಾಗೂ ನ್ಯಾಯಮೂರ್ತಿ ಸಿಎಂ ಜೋಶಿ ಅವರಿದ್ದ ಪೀಠ, ದಸರಾ ಉದ್ಘಾಟನೆ ವಿಚಾರದಲ್ಲಿ ಯಾವುದೇ ಹಕ್ಕು ಉಲ್ಲಂಘನೆ ಆಗಿರುವುದು ಕಂಡುಬಂದಿಲ್ಲ, ಹೀಗಾಗಿ ಅರ್ಜಿಯನ್ನು ತಿರಸ್ಕರಿಸಲಾಗಿದೆ ಎಂದಿದೆ.

ಮಾಜಿ ಸಂಸದ ಪ್ರತಾಪ್ ಸಿಂಹ ಸೇರಿ ಮೂವರು ಅರ್ಜಿದಾರರು ಭಾನು ಮುಷ್ತಾಕ್ ಅವರಿಗೆ ಆಹ್ವಾನ ನೀಡಿರುವುದು ಸೂಕ್ತವಲ್ಲವೆಂದು ವಾದಿಸಿದ್ದರು. ಬಾನು ಅವರು ಈ ಹಿಂದೆ ಹಲವು ಸಂದರ್ಭಗಳಲ್ಲಿ ಹಿಂದೂ ವಿರೋಧಿ ಹಾಗೂ ಕನ್ನಡ ವಿರೋಧಿ ಹೇಳಿಕೆಗಳನ್ನು ನೀಡಿದ್ದಾರೆ. ತಾಯಿ ಭುವನೇಶ್ವರಿ, ಕನ್ನಡ ಬಾವುಟ ಹಾಗೂ ಕೆಂಪು-ಹಳದಿ ಬಣ್ಣಗಳ ಕುರಿತು ನೀಡಿದ ಹೇಳಿಕೆಗಳು ಆಕ್ಷೇಪಾರ್ಹವೆಂದು ಕೋರ್ಟ್‌ಗೆ ಸಲ್ಲಿಸಲಾಯಿತು. ಭಾನು ಮುಷ್ತಾಕ್ ಅವರಿಗೆ ಮೂರ್ತಿಪೂಜೆ ಅಥವಾ ಅರಿಶಿನ-ಕುಂಕುಮದ ಮೇಲೆ ನಂಬಿಕೆ ಇಲ್ಲ. ಇಂತಹವರಿಂದ ದಸರಾ ಉದ್ಘಾಟನೆ ನಡೆಯುವುದು ಸಂಪ್ರದಾಯಕ್ಕೆ ವಿರೋಧ ಎಂದು ಪ್ರತಾಪ್ ಸಿಂಹ ಪರ ವಕೀಲ ಸುದರ್ಶನ್ ವಾದ ಮಂಡಿಸಿದರು.

ಸರ್ಕಾರದ ಪರ ವಾದ ಮಂಡಿಸಿದ ಎಜಿ ಶಶಿಕಿರಣ್ ಶೆಟ್ಟಿ, ಅರ್ಜಿದಾರರಿಗೆ ದಂಡ ವಿಧಿಸಬೇಕೆಂದು ಆಗ್ರಹಿಸಿದರು. ದಸರಾ ಉದ್ಘಾಟಿಸಿದ ನಿಸಾರ್ ಅಹಮದ್ ಜೊತೆಗೆ ಪ್ರತಾಪ್ ಸಿಂಹ ಇದ್ದರು. ಆಗ ವಿರೋಧಿಸದೇ, ಈಗ ಮುಸ್ಲಿಂ ಮಹಿಳೆ‌ ಎಂಬ ಕಾರಣಕ್ಕೆ ವಿರೋಧಿಸುತ್ತಿದ್ದಾರೆ ಎಂದರು. ತಾರತಮ್ಯ ಮಾಡುವಂತಿಲ್ಲವೆಂದು ಮುಜರಾಯಿ ಇಲಾಖೆ ಸುತ್ತೋಲೆಯಿದೆ. ದೇವಾಲಯಗಳಿಗೆ ಯಾರು ಬೇಕಾದರೂ ಬರಲು ಅವಕಾಶವಿದೆ ಎಂದು ಎಜಿ ಶಶಿಕಿರಣ್ ಶೆಟ್ಟಿ ವಾದಿಸಿದರು.

ಇದನ್ನೂ ಓದಿ;Ration Card Cancel: ಈ ತಿಂಗಳ ಕೊನೆಗೆ ಅನರ್ಹ ಬಿಪಿಎಲ್ ಕಾರ್ಡ್ ರದ್ದು

ಇದಕ್ಕೆ ಮುಖ್ಯ ನ್ಯಾಯಮೂರ್ತಿಗಳು “ಈ ದೇಶದಲ್ಲಿ ತಮ್ಮ ಅಭಿಪ್ರಾಯವನ್ನು ಹೇಳುವುದು ತಪ್ಪಲ್ಲವಲ್ಲ. ನಿಮ್ಮ ಯಾವ ಹಕ್ಕು ಉಲ್ಲಂಘನೆಯಾಗಿದೆ ಹೇಳಿ ಸಿಜೆ ವಿಭು ಬಖ್ರು ಪ್ರಶ್ನೆ ಮಾಡಿದರು. ನಿಮ್ಮ ಅಭಿಪ್ರಾಯವನ್ನು ಕೂಡಾ ಸೂಕ್ತ ವೇದಿಕೆಯಲ್ಲಿ ಹೇಳಬಹುದು. ಆದರೆ ಸಂವಿಧಾನ ನೀಡಿರುವ ಯಾವ ಹಕ್ಕು ಉಲ್ಲಂಘನೆಯಾಗಿದೆ ಹೇಳಿ” ಎಂದರು. ಅಲ್ಲದೆ “ಪೂಜಾರಿಯ ಪೂಜೆಯ ಹಕ್ಕನ್ನು ಕಿತ್ತುಕೊಂಡಿದ್ದರೆ ಪ್ರಶ್ನಿಸಬಹುದು. ವ್ಯಕ್ತಿಯ ಆಸ್ತಿಯನ್ನು ಕಿತ್ತುಕೊಂಡಿದ್ದರೆ ಪ್ರಶ್ನಿಸಬಹುದು. ಆದರೆ ಇಲ್ಲಿ ನಿಮ್ಮ ಯಾವ ಹಕ್ಕನ್ನು ಕಿತ್ತುಕೊಳ್ಳಲಾಗಿದೆ. ಹೀಗಾಗಿ ಅರ್ಜಿಯನ್ನು ವಜಾ ಗೊಳಿಸಲಾಗುತ್ತದೆ ಎಂದು ಎಂದು ಸಿಜೆ ಹೇಳಿದರು.

You may also like