Hasana: ಅಧಿದೇವತೆ ಹಾಸನಾಂಬ ದರ್ಶನೋತ್ಸವಕ್ಕೆ ದಿನಗಣನೆ ಆರಂಭವಾಗಿದ್ದು, ಅಶ್ವಿಜ ಮಾಸದ ಹುಣ್ಣಿಮೆಯ ನಂತರ ಬರುವ ಮೊದಲ ಗುರುವಾರ (ಅ.9) ರಂದು ದೇಗುಲದ ಬಾಗಿಲು ತೆರೆಯಲಾಗುತ್ತಿದ್ದು, ಸಿದ್ಧತೆ ಭರದಿಂದ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ 3-4 ದಿನ ಮುಂಚಿತವಾಗಿಯೇ ಸಿದ್ಧತೆಗಳು ಭರದಿಂದ ಸಾಗಿವೆ.
ಈ ಬಾರಿ ಅದ್ದೂರಿಯಾಗಿ ದರ್ಶನೋತ್ಸವ ನಡೆಸಲು ಉದ್ದೇಶಿಸಲಾಗಿದೆ. ಸಾರ್ವಜನಿಕರಿಗೆ ತೊಂದರೆ ಆಗದಂತೆ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತಿದ್ದು, ಮೂಲಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಶೌಚಾಲಯ, ಕುಡಿಯುವ ನೀರು, ಬ್ಯಾರಿಕೇಡ್, ಜರ್ಮನ್ ಟೆಂಟ್, ನೆಲಹಾಸು ಸೇರಿದಂತೆ ಎಲ್ಲ ಕೆಲಸಗಳು ಪ್ರಗತಿಯಲ್ಲಿವೆ.
ಈ ಬಾರಿ ವಿಶೇಷ ದರ್ಶನಕ್ಕೆ ಬರುವ ಭಕ್ತರಿಗೆ ₹ 300 ಹಾಗೂ ₹ 1 ಸಾವಿರ ಪಾಸ್ ವ್ಯವಸ್ಥೆ ಮಾಡಲಾಗಿದೆ. ಇದೇ ಮೊದಲ ಬಾರಿಗೆ ವಿಐಪಿ, ವಿವಿಐಪಿ ಪಾಸ್‌ಗಳನ್ನು ರದ್ದು ಮಾಡಲಾಗಿದ್ದು ಗೋಲ್ಡ್ ಪಾಸ್ ಜಾರಿಗೆ ತರಲಾಗಿದೆ.
15 ದಿನದ ಹಾಸನಾಂಬ ಹಾಗೂ ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದಲ್ಲಿ ಮೊದಲು ಹಾಗೂ ಕೊನೆಯ ದಿನ ಸಾರ್ವಜನಿಕರಿಗೆ ದೇವಿಯ ದರ್ಶನ ಅವಕಾಶ ಇರುವುದಿಲ್ಲ. ಈ ಬಾರಿ 13 ದಿನ ಮಾತ್ರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ರಾಜ್ಯದಲ್ಲಿಯೇ ಇದೇ ಮೊದಲ ಬಾರಿ ದೇವಾಲಯದ ಟಿಕೆಟ್ ಬುಕ್ ಮಾಡಲು ವಾಟ್ಸ್‌ಆಯಪ್ ಮೂಲಕ ಅವಕಾಶ ಕಲ್ಪಿಸಲಾಗಿದೆ ಎಂದು ದೇಗುಲದ ಆಡಳಿತಾಧಿಕಾರಿಯೂ ಆದ ಉಪ ವಿಭಾಗಾಧಿಕಾರಿ ಮಾರುತಿ ತಿಳಿಸಿದ್ದಾರೆ.
ಮೊ: 6366105589 ಸೇವ್ ಮಾಡಿಕೊಂಡು ‘Hi’ ಎಂದು ಮೆಸೇಜ್ ಮಾಡಿದ ಬಳಿಕ ಅದರಲ್ಲಿ ನೀಡುವ ಸೂಚನೆ ಪಾಲಿಸದರೆ ಸಾಕು ಯಾವ್ಯಾವ ದಿನ ಎಷ್ಟು ಗಂಟೆಗೆ ದರ್ಶನ ಎನ್ನುವ ಮಾಹಿತಿಯೂ ತಿಳಿಯಲಿದೆ. ವಾಟ್ಸ್‌ಆಯಪ್ ಮೂಲಕ ಟಿಕೆಟ್ ಬುಕ್ ಮಾಡುವ ಚಾಟ್ ಬೋಟ್ ಮೊದಲು ಬಾರಿಗೆ ಬಳಸಲಾಗಿದೆ ಎಂದು ಉಪ ವಿಭಾಗಾಧಿಕಾರಿ ತಿಳಿಸಿದ್ದಾರೆ.
