2017 ರಲ್ಲಿ ಬಾಲಕಿಯ ದುಪ್ಪಟ ಎಳೆದು ಮದುವೆ ಆಗುವಂತೆ ಒತ್ತಾಯಿಸಿದ ಪ್ರಕರಣವೊಂದರ ವಿಚಾರಣೆ ವೇಳೆ ಕೋಲ್ಕತ್ತಾ ಹೈಕೋರ್ಟ್, ಲೈಂಗಿಕ ಕಿರುಕುಳ ಹಾಗೂ ಪೋಸ್ಕೋ ಕಾಯ್ದೆ ಕುರಿತು ವ್ಯಾಖ್ಯಾನ ನೀಡಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಷನ್ಸ್ ನ್ಯಾಯಾಲಯ ನೀಡಿದ್ದ ತೀರ್ಪನ್ನು ರದ್ದುಗೊಳಿಸಿದ್ದು,ದುಪ್ಪಟ್ಟಾ ಹಿಡಿದೆಳೆದು ಮದುವೆಗೆ ಒತ್ತಾಯಿಸುವುದು ಲೈಂಗಿಕ ಕಿರುಕುಳವಲ್ಲ ಹಾಗೂ ಇಂತಹ ಪ್ರಕರಣಕ್ಕೆ ಪೋಸ್ಕೋ ಕಾಯ್ದೆ ಅನ್ವಯಿಸುವುದಿಲ್ಲವೆಂದು ಹೈಕೋರ್ಟ್ ಆದೇಶ ನೀಡಿದೆ.
ನ್ಯಾಯಮೂರ್ತಿ ವಿವೇಕ್ ಚೌಧರಿ ಅವರನ್ನೊಳಗೊಂಡ ನ್ಯಾಯಪೀಠ ಈ ಆದೇಶ ನೀಡಿದ್ದಾರೆ.’ಅಧೀನ ನ್ಯಾಯಾಲಯ ತೀರ್ಪು ನೀಡುವ ಮುನ್ನ ಕೆಲವೊಂದು ಅಂಶಗಳನ್ನು ಗಣನೆಗೆ ತೆಗೆದುಕೊಂಡಿಲ್ಲ ಎಂದು ಹೇಳಲಾಗಿದೆ. ಇದರಿಂದಾಗಿ ಅಮಾಯಕರಿಗೆ ನ್ಯಾಯ ಸಿಗುವುದಿಲ್ಲವೆಂದು’ಹೈಕೋರ್ಟ್ ತಿಳಿಸಿದೆ.
ಪ್ರಕರಣದ ಹಿನ್ನಲೆ
2017 ರ ಆಗಸ್ಟ್ ನಲ್ಲಿ ಶಾಲೆಯಿಂದ ಮನೆಗೆ ಮರಳುತ್ತಿದ್ದ ಬಾಲಕಿಯನ್ನು ರಸ್ತೆ ಮಧ್ಯೆ ಅಡ್ಡಗಟ್ಟಿದ್ದ ಯುವಕ, ಆಕೆಯ ದುಪ್ಪಟ್ಟಾ ಹಿಡಿದೆಳೆದು ಆಕೆಯ ಕೈ ಹಿಡಿದು ತನ್ನನ್ನು ಮದುವೆಯಾಗುವಂತೆ ಒತ್ತಾಯಿಸಿದ್ದ. ಅಲ್ಲದೇ ಇದಕ್ಕೆ ಒಪ್ಪದಿದ್ದರೆ ಆಸಿಡ್ ಹಾಕುವುದಾಗಿ ಬೆದರಿಕೆ ಕೂಡ ಒಡ್ಡಿದ್ದ ಎಂದು ಆರೋಪಿಸಲಾಗಿತ್ತು.ಈ ಪ್ರಕರಣದ ವಿಚಾರಣೆ ನಡೆಸಿದ್ದ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಕಾಂದಿ, ಪೋಸ್ಕೋ ಕಾಯ್ದೆ ಸೆಕ್ಷನ್ 8 ಹಾಗೂ 12 ಮತ್ತು ಭಾರತೀಯ ದಂಡ ಸಂಹಿತೆ ಪ್ರಕ್ರಿಯೆ 354, 354B, 506 ಮತ್ತು 509 ಅಡಿ ಶಿಕ್ಷೆ ವಿಧಿಸಿದ್ದರು.ಆದರೆ ಇದನ್ನು ಪ್ರಶ್ನಿಸಿ ಆರೋಪಿ ಹೈಕೋರ್ಟ್ ಮೆಟ್ಟಿಲೇರಿದ್ದ.
ಇದೀಗ ಕೋಲ್ಕತ್ತಾ ಹೈಕೋರ್ಟ್ ಈ ಎಲ್ಲ ಪ್ರಕರಣಗಳನ್ನು ಕೈಬಿಟ್ಟಿದೆ.ಆದರೆ ಭಾರತೀಯ ದಂಡ ಸಂಹಿತೆ ಪ್ರಕ್ರಿಯೆ 354(1)(ii) ಹಾಗೂ 506 ರ ಅನ್ವಯ ಸೆಷನ್ಸ್ ನ್ಯಾಯಾಲಯ ವಿಧಿಸಿದ್ದ ಶಿಕ್ಷೆ ಪರಿಗಣಿಸಬಹುದಾಗಿದೆ ಎಂದು ಅಭಿಪ್ರಾಯಪಟ್ಟಿದೆ.
