Home » ರಸ್ತೆಯಲ್ಲೇ ಸಿಪಿಆರ್ ನಡೆಸಿದ ನರ್ಸ್ | ಉಳಿಯಿತು 20 ರ ಯುವಕನ ಪ್ರಾಣ

ರಸ್ತೆಯಲ್ಲೇ ಸಿಪಿಆರ್ ನಡೆಸಿದ ನರ್ಸ್ | ಉಳಿಯಿತು 20 ರ ಯುವಕನ ಪ್ರಾಣ

0 comments

ಅದೆಷ್ಟೋ ಮಂದಿ ಅಪಘಾತವಾಗಿದ್ದರೆ ಅಥವಾ ಏನೋ ಗಾಯಗಳಾದ ಸಮಯದಲ್ಲಿ ರೋಗಿಯನ್ನು ರಕ್ಷಿಸುವ ಬದಲು ನೋಡಿಕೊಂಡು ನಿಲ್ಲುವವರೇ ಜಾಸ್ತಿ. ಆಸ್ಪತ್ರೆಗೆ ಸಾಗಿಸುವ ಬದಲು ವಿಡಿಯೋ, ಫೋಟೋ ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುವವರೇ ಜಾಸ್ತಿ.ಆದರೆ ಇಲ್ಲೊಂದು ಕಡೆ ಮಹಿಳೆ ಕರ್ತವ್ಯ ನಿಷ್ಠೆ ಪಾಲಿಸಿ ಹುಡುಗನ ಪ್ರಾಣವನ್ನೇ ಉಳಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಆರೋಗ್ಯ ವಿಷಯದಲ್ಲಿ ತುರ್ತು ಪರಿಸ್ಥಿತಿ ಎದುರಿಸುತ್ತಿರುವವರಿಗೆ ಸಿಪಿಆರ್ ಮೂಲಕ ಪ್ರಥಮ ಚಿಕಿತ್ಸೆ ವಿಧಾನದಿಂದ ಜೀವ ಉಳಿಸಿದಬಹುದೆಂದು ತಿಳಿದೇ ಇದೆ. ಇದೇ ಮಾದರಿಯನ್ನು ಬಳಸಿ ತಿರುಚ್ಚಿಯ ದಾದಿಯೊಬ್ಬರು 20 ವರ್ಷದ ಯುವಕನ ಜೀವ ಉಳಿಸಿದ್ದಾರೆ. ಇದೀಗ ನರ್ಸ್ ನ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ, ಮೆಚ್ಚುಗೆಯ ಮಹಾಪೂರವೇ ಹರಿದುಬಂದಿದೆ.

ಘಟನೆಯ ವಿವರ :

ಮನ್ನಾರ್ ಗುಡಿ ಸರ್ಕಾರಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕಾರ್ಯನಿರ್ವಹಣೆ ಮಾಡುತ್ತಿರುವ ವನಜಾ, ತಮ್ಮ ಪತಿಯೊಂದಿಗೆ ಸಮಾರಂಭವೊಂದರಲ್ಲಿ ಭಾಗಿಯಾಗಿ ವಾಪಸ್ಸಾಗುತ್ತಿದ್ದರು. ಈ ವೇಳೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಯುವಕನೋರ್ವ ಮೇಕೆಗೆ ಡಿಕ್ಕಿ ಹೊಡೆದ ಪರಿಣಾಮ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ.ನಾಡಿ ಮಿಡಿತ ಕ್ಷೀಣ ಪರಿಸ್ಥಿತಿಯಲ್ಲಿದ್ದ ಆತನ ಪರಿಸ್ಥಿತಿಯನ್ನು ಕಂಡು ವನಜಾ 2-3 ನಿಮಿಷಗಳ ಕಾಲ ಸಿಪಿಆರ್ ಪ್ರಕ್ರಿಯೆ ಮೂಲಕ ಆತನ ರಕ್ಷಣೆಗೆ ಮುಂದಾದರು. ಸಿಪಿಆರ್ ಪೂರ್ಣಗೊಳ್ಳುತ್ತಿದ್ದಂತೆಯೇ ಆತ ಪ್ರಜ್ಞಾಹೀನ ಸ್ಥಿತಿಯಿಂದ ಹೊರಬಂದಿದ್ದ. ಆ ವೇಳೆಗೆ ವನಜಾ ಅವರ ಪತಿ 108 ಆಂಬುಲೆನ್ಸ್ ಸೇವೆಗೆ ಕರೆ ಮಾಡಿದ್ದರು.ಪ್ರಾಥಮಿಕ ಚಿಕಿತ್ಸೆಯ ನಂತರ ಆತನನ್ನು ತಂಜಾವೂರ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದ್ದು,ಆಸ್ಪತ್ರೆಯ ಮಾಹಿತಿಯ ಪ್ರಕಾರ ಯುವಕ ಗುಣಮುಖನಾಗುತ್ತಿದ್ದಾನೆ.

ಈ ಘಟನೆ ಬಗ್ಗೆ ವನಜಾ ಅವರು ಮಾತನಾಡಿ,ಇದು ನನ್ನ ಕರ್ತವ್ಯವಷ್ಟೇ ಎಂದಿದ್ದಾರೆ. ನಾನು ವಿಶೇಷವಾದದ್ದೇನನ್ನೂ ಮಾಡಿಲ್ಲ ನಾವು ದಿನ ನಿತ್ಯ ಆಸ್ಪತ್ರೆಯಲ್ಲಿ ಸಿಪಿಆರ್ ನ್ನು ಮಾಡುತ್ತಿರುತ್ತೇವೆ ಎಂದು ಹೇಳಿದ್ದಾರೆ.

You may also like

Leave a Comment