ಚಿಕ್ಕಮಗಳೂರು : ಮನೆಗೆ ತೆರಳಲು ರಸ್ತೆ ನಿರ್ಮಿಸುವ ವಿಚಾರಕ್ಕೆ ಸಂಬಂಧಿಸಿದಂತೆ ತನ್ನ ಮನೆಯ ನೆರೆಯವರು ನೀಡುತ್ತಿದ್ದ ಕಿರುಕುಳಕ್ಕೆ ಬೇಸತ್ತು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೂಡಿಗೆರೆ ತಾಲೂಕಿನ ಗೋಣಿಬೀಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವರದಿಯಾಗಿದೆ.
ಮೂಡಿಗೆರೆ ತಾಲೂಕಿನ ಕಸ್ಕೆಬೈಲ್ ಗ್ರಾಮದ ಆನಂದ್(57) ಎಂಬವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಇವರ ಮೃತದೇಹ ಗ್ರಾಮದ ಹಿಂದೂ ರುದ್ರಭೂಮಿಯಲ್ಲಿ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.
ತನ್ನ ಮನೆಗೆ ತೆರಳಲು ರಸ್ತೆ ಇಲ್ಲದ ಕಾರಣಕ್ಕೆ ಮನೆಯ ಹಿಂಬದಿಯ ಜಾಗದಲ್ಲಿ ರಸ್ತೆಗೆ ಜಾಗ ಬಿಡಿಸಿಕೊಡುವಂತೆ ಆನಂದ್ ಅವರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದರು. ಆದರೆ ರಸ್ತೆಗೆ ಜಾಗ ಬಿಡಲು ಅಶೋಕ್ ಹಾಗೂ ಯಶೋಧ ಎಂಬವರು ಒಪ್ಪದೇ ಕಿರುಕುಳ ಹಾಗೂ ಬೆದರಿಕೆಯನ್ನು ಹಾಕಿದ್ದರು. ಇದರಿಂದ ಬೇಸತ್ತ ಆನಂದ್ ಕೆಲ ದಿನಗಳ ಹಿಂದೆ ಮನೆ ಬಿಟ್ಟು ಹೋಗಿದ್ದು, ಇತ್ತೀಚೆಗೆ ಅವರ ಮೃತದೇಹ ಗ್ರಾಮದ ಹಿಂದೂ ರುದ್ರಭೂಮಿಯಲ್ಲಿ ಪತ್ತೆಯಾಗಿದ್ದು, ಜೊತೆಗೆ ವಿಷದ ಬಾಟಲಿಯೂ ಪತ್ತೆಯಾಗಿದೆ.
ಈ ಘಟನೆ ಸಂಬಂಧ ಮೃತ ಆನಂದ್ ಅವರ ಮಗ ಅಂಕಿತ್ ಎಂಬವರು ಗೋಣಿಬೀಡು ಪೊಲೀಸರಿಗೆ ದೂರು ನೀಡಿದ್ದು, ದೂರಿನಲ್ಲಿ ತನ್ನ ತಂದೆಯ ಸಾವಿಗೆ ಅಶೋಕ್, ಯಶೋದ ಅವರು ನೀಡುತ್ತಿದ್ದ ಕಿರುಕುಳ, ಬೆದರಿಕೆ ಕಾರಣ. ಸರಕಾರಿ ಜಾಗ ಒತ್ತುವರಿ ಮಾಡಿಕೊಂಡಿದ್ದ ಅಶೋಕ್, ಯಶೋಧಾ ಅವರು ತನ್ನ ತಂದೆ ತಾಯಿ ವಿರುದ್ಧ ದೂರು ನೀಡಿದ್ದರು. ದೂರಿನ ಹಿನ್ನೆಲೆಯಲ್ಲಿ ತಂದೆ ತಾಯಿ ನ್ಯಾಯಾಲಯದಲ್ಲಿ ಜಾಮೀನು ಪಡೆದುಕೊಂಡಿದ್ದರು ಎಂದು ಅವರು ಆರೋಪಿಸಿದ್ದಾರೆ.
