ತಾತ್ಸಾರದ ನೋಟ, ಅಸಡ್ಡೆಯ ಮಾತು, ಕಚೇರಿಗಳಿಗೆ ಚಿಲ್ಲರೆ ಪಿಂಚಣಿ ದುಡ್ಡಿಗೆ ಅಲೆದಾಟ, ಅಂಗವಿಕಲನಾಗಿರುವ ಇವನೇನು ಮಾಡಿಯಾನು ಎಂಬ ಪ್ರಶ್ನೆ…! ಈ ಎಲ್ಲಾ ಅಂಶಗಳಿಂದ ಅಂಗವಿಕಲನ ಆತ್ಮವಿಶ್ವಾಸವೇ ಕುಗ್ಗಿಹೋಗುತ್ತದೆ. ಆದರೆ ಇವುಗಳನ್ನೆಲ್ಲ ಬದಿಗೊತ್ತಿ, ಸಾಧಿಸುವ ಛಲವಿದ್ದರೆ ಅಂಗವಿಕಲತೆ ಒಂದು ನ್ಯೂನತೆ ಅಲ್ಲ ಎಂಬುದಕ್ಕೆ ದೆಹಲಿಯ ವ್ಯಕ್ತಿಯೊಬ್ಬರು ತಾಜಾ ಉದಾಹರಣೆಯಾಗಿದ್ದಾರೆ. ವಿಕಲಾಂಗರಿಗೆ ಹೊಸ ಹುಮ್ಮಸ್ಸು ಮೂಡಿಸುವಂತಿದೆ ಆತನ ಕಾನ್ಫಿಡೆನ್ಸ್ !
ಆತನಿಗೆ ಎರಡೂ ಕೈಗಳಿಲ್ಲ. ದುರದೃಷ್ಟ ಎಷ್ಟರಮಟ್ಟಿಗೆ ಇದೆ ಎಂದರೆ ಎರಡು ಕಾಲುಗಳು ಕೂಡಾ ಇಲ್ಲ. ಹಾಗೆ ಕೈಕಾಲುಗಳಿಲ್ಲದ ಈ ಅಸಹಾಯಕ ಅನ್ನಿಸುವ ವ್ಯಕ್ತಿಗೆ ದುಡಿದು ಬದುಕುವ ಸ್ವಾಭಿಮಾನ ಮಾತ್ರ ಕುಂದಿಲ್ಲ. ಸ್ಕೂಟಿ ಎಂಜಿನ್ ಬಳಸಿ ತಯಾರಿಸಿದ ಬ್ಯಾಟರಿ ರಿಕ್ಷಾ ರೀತಿಯ ವಾಹನವನ್ನು ಓಡಿಸುತ್ತಾ ಆತ ಜೀವನ ಸಾಗಿಸುತ್ತಿದ್ದಾರೆ. ಈ ವೀಡಿಯೊವನ್ನು ಮಹೀಂದ್ರಾ ಗ್ರೂಪ್ ಮುಖ್ಯಸ್ಥ ಆನಂದ್ ಮಹೀಂದ್ರಾ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಅಚ್ಚರಿ ವ್ಯಕ್ತಪಡಿಸಿದ್ದಾರೆ.
‘ಈ ದಿನ ನನ್ನ ಟೈಮ್ ಲೈನ್‌ಗೆ ಈ ವೀಡಿಯೊ ಬಂದಿದೆ. ಇದು ಎಷ್ಟು ಹಳೆಯದು ಅಥವಾ ಎಲ್ಲಿಂದ ಬಂದಿದೆ ಎಂದು ನನಗೆ ತಿಳಿದಿಲ್ಲ, ಆದರೆ ಈ ಸಂಭಾವಿತ ವ್ಯಕ್ತಿಯಿಂದ ನಾನು ವಿಸ್ಮಯಗೊಂಡಿದ್ದೇನೆ. ಅವರು ತಮ್ಮ ಅಂಗವೈಕಲ್ಯದ ನಡುವೆ ಅವರು ಆ ವ್ಯಕ್ತಿಗೆ ತನ್ನ ಬದುಕು ಈ ರೀತಿ ಇರುವುದಕ್ಕೆ ಕೂಡಾ ಕೃತಜ್ಞರಾಗಿದ್ದಾರೆ’ ಎಂದು ಆನಂದ್ ಮಹೀಂದ್ರಾ ಬರೆದುಕೊಂಡಿದ್ದಾರೆ.
ಬಳಿಕ ಅವರು ವೀಡಿಯೊವನ್ನು ಸಹೋದ್ಯೋಗಿ ರಾಮ್ ಮತ್ತು ಮಹೀಂದ್ರಾ ಲಾಜಿಸ್ಟಿಕ್ಸ್ ಅವರಿಗೆ ಟ್ಯಾಗ್ ಮಾಡಿದ್ದು, ‘ರಾಮ್, ಅವರನ್ನು ವ್ಯಾಪಾರದ ಡೆಲಿವರಿ ಸಹಾಯಕರನ್ನಾಗಿ ಮಾಡಬಹುದೇ?’ ಎಂದು ಕೇಳಿದ್ದಾರೆ. ಸದ್ಯಕ್ಕೆ ಅವರನ್ನು ತಮ್ಮ ಕಂಪೆನಿಯಲ್ಲಿ ಕೆಲಸಕ್ಕೆ ಸೇರಿಸಿಕೊಳ್ಳಲು ಒಂದು ತಂಡದ ಮೂಲಕ ಹುಡುಕಲಾಗುತ್ತಿದೆ ಎಂದು ಹೇಳಲಾಗುತ್ತಿದೆ.
ಎರಡೂ ಕೈ ಮತ್ತು ಕಾಲುಗಳಿಲ್ಲದ ವ್ಯಕ್ತಿ, ಪ್ರಯಾಣಿಕರ ಪ್ರಶ್ನೆಗೆ ಉತ್ತರಿಸುತ್ತಿರುವುದನ್ನು ಈ ವೀಡಿಯೊದಲ್ಲಿ ಕಾಣಬಹುದಾಗಿದೆ. ಸಹ ಪ್ರಯಾಣಿಕರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಅಂಗವೈಕಲ್ಯದ ನಡುವೆಯೂ ವಾಹನವನ್ನು ಚಲಾಯಿಸುತ್ತಿರುವ ಬಗ್ಗೆ ವಿವರಿಸಿದ್ದಾರೆ.
‘ನನಗೆ ಹೆಂಡತಿ, ಇಬ್ಬರು ಪುಟ್ಟ ಮಕ್ಕಳು ಮತ್ತು ವಯಸ್ಸಾದ ತಂದೆ ಇದ್ದಾರೆ. ಅದಕ್ಕಾಗಿಯೇ ನಾನು ದುಡಿಯಲು ಬರುತ್ತೇನೆ’ ಎಂದು ಹೆಸರು ಹೇಳಲಿಚ್ಛಿಸದ ಅಂಗವಿಕಲ ವ್ಯಕ್ತಿ ಹೇಳುತ್ತಾರೆ. ಐದು ವರ್ಷಗಳಿಂದ ನಾನು ಈ ವಾಹನವನ್ನು ಓಡಿಸುತ್ತಿದ್ದೇನೆ ಎಂದು ಅವರು ವಿವರಿಸಿದರು. ತಮ್ಮ ಛಲವನ್ನು ಕಂಡು ಅಭಿನಂದಿಸಿ ವೀಡಿಯೊ ಚಿತ್ರೀಕರಿಸುವ ಜನರನ್ನು ಕಂಡು ಆತ ಮುಗುಳ್ನಗೆ ಬೀರುತ್ತಿದ್ದರು. ಈ ವೀಡಿಯೊ ಒಂದೆರಡು ವಾರಗಳಿಂದ ಇಂಟರ್ನೆಟ್‌ನಲ್ಲಿ ಹರಿದಾಡುತ್ತಿದ್ದು, ಭಾರಿ ವೈರಲ್ ಆಗಿದೆ.
