Home » ಹೊಸವರ್ಷದ ಆರಂಭದಲ್ಲೇ ಅಶುಭ ವಾರ್ತೆ | ಜಮ್ಮು ಕಾಶ್ಮೀರದ ವೈಷ್ಣೋ ದೇವಿ ಮಂದಿರದಲ್ಲಿ ಕಾಲ್ತುಳಿತ, 12 ಜನರ ಸಾವು, ಹಲವರಿಗೆ ಗಾಯ

ಹೊಸವರ್ಷದ ಆರಂಭದಲ್ಲೇ ಅಶುಭ ವಾರ್ತೆ | ಜಮ್ಮು ಕಾಶ್ಮೀರದ ವೈಷ್ಣೋ ದೇವಿ ಮಂದಿರದಲ್ಲಿ ಕಾಲ್ತುಳಿತ, 12 ಜನರ ಸಾವು, ಹಲವರಿಗೆ ಗಾಯ

0 comments

ಶ್ರೀನಗರ: ಹೊಸವರ್ಷದ ಆರಂಭದಲ್ಲೇ ಅಶುಭ ವಾರ್ತೆ ಬಂದಿದೆ. ಜಮ್ಮು ಮತ್ತು ಕಾಶ್ಮೀರದ ಪ್ರಸಿದ್ಧ ಮಾತಾ ವೈಷ್ಣೋ ದೇವಿ ದೇಗುಲದಲ್ಲಿ ಭಕ್ತರ ಭೇಟಿಯ ವೇಳೆ ಉಂಟಾದ ಕಾಲ್ತುಳಿತದಲ್ಲಿ ಕನಿಷ್ಠ 12 ಜನರು ಮೃತಪಟ್ಟಿದ್ದಾರೆ. ಮತ್ತು 13 ಜನರಿಗೆ ಗಾಯಗಳಾಗಿವೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ಅಲ್ಲಿನ ತ್ರಿಕೂಟ ಬೆಟ್ಟಗಳ ಮೇಲಿರುವ ದೇಗುಲದ ಗರ್ಭಗುಡಿಯ ಹೊರಗೆ ಮುಂಜಾನೆ 2.45ರ ಸುಮಾರಿಗೆ ಕಾಲ್ತುಳಿತ ಸಂಭವಿಸಿದೆ. ಯಾತ್ರಾರ್ಥಿಗಳ ನಡುವೆ ನೂಕು ನುಗ್ಗಲಿನ ಸಂದರ್ಭ ವಾಗ್ವಾದ ನಡೆದು, ಒಬ್ಬರಿಗೊಬ್ಬರು ತಳ್ಳಿದ ವೇಳೆ ಘಟನೆ ನಡೆದಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಡಿಜಿಪಿ ದಿಲ್ಬಾಗ್ ಸಿಂಗ್ ತಿಳಿಸಿದ್ದಾರೆ.

ಹೊಸ ವರ್ಷದ ಅಂಗವಾಗಿ ಭಕ್ತರು ಅಧಿಕ ಸಂಖ್ಯೆಯಲ್ಲಿ ಆಗಮಿಸಿದ್ದರಿಂದ ನೂಕು ನುಗ್ಗಲು ಉಂಟಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಮತ್ತು ದೇಗುಲದ ಮಂಡಳಿಯ ಪ್ರತಿನಿಧಿಗಳು ಆಗಮಿಸಿದ್ದಾರೆ.

ಒಟ್ಟು 12 ಜನರು ಮೃತಪಟ್ಟಿರುವುದು ದೃಢಪಟ್ಟಿದ್ದು, ಮೃತ ದೇಹಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗಾಯಗೊಂಡಿರುವ 13 ಜನರನ್ನು ಮಾತಾ ವೈಷ್ಣೋ ದೇವಿ ನಾರಾಯಣ ಸೂಪರ್‌ಸ್ಪೆಷಾಲಿಟಿ ಆಸ್ಪತ್ರೆ ಸೇರಿ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಹಲವರ ಸ್ಥಿತಿ ಗಂಭೀರವಾಗಿದೆ.

You may also like

Leave a Comment