Home » ಸಹಪಾಠಿ ವಿದ್ಯಾರ್ಥಿನಿಗೆ ಲವ್ ಲೆಟರ್ ನೀಡಿದ 6 ನೇ ತರಗತಿ ವಿದ್ಯಾರ್ಥಿ !! | ಶಿಕ್ಷಕಿಯಿಂದ ಬಾಲಕನಿಗೆ ಬಿತ್ತು ಬಾಸುಂಡೆ ಏಟು

ಸಹಪಾಠಿ ವಿದ್ಯಾರ್ಥಿನಿಗೆ ಲವ್ ಲೆಟರ್ ನೀಡಿದ 6 ನೇ ತರಗತಿ ವಿದ್ಯಾರ್ಥಿ !! | ಶಿಕ್ಷಕಿಯಿಂದ ಬಾಲಕನಿಗೆ ಬಿತ್ತು ಬಾಸುಂಡೆ ಏಟು

0 comments

ಕಾಲೇಜು ವಿದ್ಯಾರ್ಥಿಗಳು ಪ್ರೀತಿ-ಪ್ರೇಮದ ಹಿಂದೆ ಬಿದ್ದು ಭವಿಷ್ಯವನ್ನು ಹಾಳುಮಾಡಿಕೊಳ್ಳುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಆದರೆ ನಿಜವಾದ ಪ್ರಪಂಚ ಏನು ಎಂಬುದನ್ನು ತಿಳಿದುಕೊಳ್ಳುವ ಶಕ್ತಿ ಸಹ ಇಲ್ಲದ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಯೊಬ್ಬ ತನ್ನ ಸಹಪಾಠಿ ವಿದ್ಯಾರ್ಥಿನಿಗೆ ಲವ್ ಲೆಟರ್ ಕೊಟ್ಟು ಶಾಲೆಯ ಶಿಕ್ಷಕಿಯಿಂದ ಬಾಸುಂಡೆ ಬರುವಂತೆ ಹೊಡೆತ ತಿಂದ ಘಟನೆಯೊಂದು ಬೆಳಕಿಗೆ ಬಂದಿದೆ.

ಹೊನ್ನಾವರದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದೆ. ಆರನೇ ತರಗತಿ ವಿದ್ಯಾರ್ಥಿ ತನ್ನ ಸಹಪಾಠಿ ವಿದ್ಯಾರ್ಥಿನಿಗೆ ಸಿನಿಮಾ ಸ್ಟೈಲ್‌ನಲ್ಲಿ ಲವ್ ಲೆಟರ್ ಕೊಟ್ಟು ಪ್ರೇಮ ನಿವೇದನೆ ಮಾಡಿಕೊಂಡಿದ್ದಾನೆ. ವಿದ್ಯಾರ್ಥಿನಿ ಈ ಲೆಟರ್‌ನ್ನು ಶಾಲೆಯ ಶಿಕ್ಷಕಿ ಕಲ್ಪನ ಹೆಗಡೆಯವರಿಗೆ ನೀಡಿದ್ದಾಳೆ.

ಲವ್ ಲೆಟರ್ ನೋಡಿ ಸಿಟ್ಟಾದ ಶಿಕ್ಷಕಿ ವಿದ್ಯಾರ್ಥಿಯನ್ನು ಕರೆಸಿ ಕೋಪದಿಂದ ಬಾಸುಂಡೆ ಬರುವಂತೆ ಹೊಡೆದಿದ್ದಾರೆ. ಅವರ ಹೊಡೆತಕ್ಕೆ ಬಾಲಕನ ಬೆನ್ನುಗಳಲ್ಲಿ ಬಾಸುಂಡೆ ಎದ್ದು ನಲುಗಿ ಹೋಗಿದ್ದಾನೆ. ಈ ವಿಷಯ ತಡವಾಗಿ ಪೋಷಕರಿಗೆ ತಿಳಿದಿದ್ದು ,ಬಾಲಕನ ಬಟ್ಟೆ ಬಿಚ್ಚಿ ನೋಡಿದಾಗ ಬೆನ್ನು ಕೆಂಪಾಗಿತ್ತು. ತಕ್ಷಣ ಪೋಷಕರು ಶಿಕ್ಷಕಿಯನ್ನು ತರಾಟೆ ತೆಗೆದುಕೊಂಡಿದ್ದು ಗಲಾಟೆ ನಡೆದಿದೆ. ಕೊನೆಗೆ ಶಿಕ್ಷಕಿ ಪೋಷಕರಲ್ಲಿ ಕ್ಷಮೆ ಕೇಳುವ ಮೂಲಕ ಪ್ರಕರಣ ಇತ್ಯರ್ಥವಾಗಿದೆ.

ಈ ದಿನಗಳಲ್ಲಿ ಮಕ್ಕಳು ಮೊಬೈಲ್, ಸಿನಿಮಾ ಎಂದು ಚಿಕ್ಕ ವಯಸ್ಸಿನಲ್ಲಿಯೇ ದಾರಿ ತಪ್ಪುತ್ತಿರುವುದು ಇಂದಿನ ಪೀಳಿಗೆಗಳು ಯಾವ ಕಡೆ ವಾಲುತ್ತಿವೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಶಿಕ್ಷಕಿಯು ಕೂಡ ಈ ತಪ್ಪನ್ನು ಸರಿಯಾದ ರೀತಿಯಲ್ಲಿ ತಿದ್ದದೆ ಬಾಲಕನ ಮೇಲೆ ಕ್ರೌರ್ಯ ತೋರಿಸಿದ್ದು ಕೂಡ ಖಂಡನೀಯವಾಗಿದೆ.

You may also like

Leave a Comment