2
ಬೆಂಗಳೂರು : ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಶಿವಮೊಗ್ಗದಲ್ಲಿ ಬಜರಂಗದಳದ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣ ಸಂಬಂಧ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು. ಎಡಿಜಿಪಿ ಎಸ್ ಮುರುಗನ್ ಅವರನ್ನೇ ಸ್ಥಳಕ್ಕೆ ಕಳುಹಿಸಿಕೊಡಲಾಗಿದೆ. ಪರಿಸ್ಥಿತಿಯನ್ನು ಹತೋಟಿಗೆ ತರಲು ಪೊಲೀಸರು ಎಲ್ಲಾ ಕ್ರಮಗಳನ್ನು ಕೈಗೊಂಡಿದ್ದಾರೆ. ಅಲ್ಲಲ್ಲಿ ಸಣ್ಣಪುಟ್ಟ ಅಹಿತಕರ ಘಟನೆಗಳು ನಡೆದಿದೆ ಎಂದರು.
ಹರ್ಷ ಹತ್ಯೆ ಸಂಬಂಧ ಈಗಾಗಲೇ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಐವರು ಆರೋಪಿಗಳು ಇರುವುದಾಗಿ ಹೇಳಲಾಗುತ್ತಿದೆ. ಈ ನಿಟ್ಟಿನಲ್ಲಿ ತನಿಖೆ ನಡೆಸಲಾಗುತ್ತಿದೆ. ತನಿಖೆಯ ಬಳಿಕ ಸ್ಪಷ್ಟ ಮಾಹಿತಿ ತಿಳಿಯಲಿದೆ. ಪರಿಸ್ಥಿತಿ ನಿಯಂತ್ರಣ ಮಾಡಲು 200 ಪೊಲೀಸರನ್ನು ಬೆಂಗಳೂರಿನಿಂದ ನಿಯೋಜಿಸಲಾಗಿದೆ. ಯಾವುದೇ ಸಂಘಟನೆಯನ್ನು ಬ್ಯಾನ್ ಮಾಡೋ ಮೊದಲು ಕಾನೂನಿನ ಅನುಸಾರವಾಗಿ ಮಾಡಬೇಕು. ಎಲ್ಲಿಯೂ ಮೃದು ಧೋರಣೆ ಇಲ್ಲ ಎಂದು ಹೇಳಿದರು.
