ಹಲವು ವರ್ಷಗಳ ಹಿಂದೆ ಮಂಗಳೂರಿನ ಮಾರಿಪಳ್ಳದಲ್ಲಿ ನಡೆದ ಗೃಹಿಣಿಯ ಕೊಲೆ ಪ್ರಕರಣವನ್ನೇ ಹೋಲುವ ಇನ್ನೊಂದು ಪ್ರಕರಣ ಮುಂಬೈ ನಿಂದ ವರದಿಯಾಗಿದೆ. ತನ್ನ ಪತ್ನಿಯನ್ನು ಹೊಡೆದು ಕೊಂದ ಬಳಿಕ ಆಕೆ ಮಹಡಿ ಮೇಲಿಂದ ಬಿದ್ದು ಗಾಯಗೊಂಡಿದ್ದಾಳೆ ಎಂದು ಕಥೆ ಕಟ್ಟಿದ ಪತಿರಾಯ ಈಗ ಪೊಲೀಸರ ಅತಿಥಿಯಾಗಿದ್ದಾನೆ.
ಮಹಾರಾಷ್ಟ್ರದ ಧಾರಾವಿಯಲ್ಲಿ ಈ ಘಟನೆ ನಡೆದಿದ್ದು,27 ವರ್ಷದ ಯುವಕ ರಾಹುಲ್ ತನ್ನ ಪತ್ನಿ ರೋಷನಿ(22) ಗೆ ಹಲ್ಲೆ ನಡೆಸಿದ್ದು ಹಲ್ಲೆಯಿಂದ ಗಂಭೀರ ಗಾಯಗೊಂಡ ಆಕೆಯನ್ನು ಪ್ರಜ್ಞಾಹೀನ ಸ್ಥಿತಿಯಲ್ಲೇ ಆಸ್ಪತ್ರೆಗೆ ದಾಖಲಿಸಿದ್ದಾನೆ.
ವೈದ್ಯರ ಮುಂದೆ ತನ್ನ ಪತ್ನಿ ತಲೆ ತಿರುಗಿ ಮಹದಿಯಿಂದ ಬಿದ್ದಿದ್ದಾಳೆ ಎಂದು ಕಥೆ ಪೋಣಿಸಿದ ಖತರ್ನಾಕ್ ಗಂಡನ ವಾಸ್ತವ ಪೊಲೀಸರ ವಿಚಾರಣೆಯ ಬಳಿಕ ಹೊರಬಿದ್ದಿದೆ. ಆಕೆ ಆಕಸ್ಮಿಕವಾಗಿ ಸಾವನ್ನಪ್ಪಿದ್ದಾಳೆ ಎಂದು ನಂಬಿದ್ದ ಪೊಲೀಸರು ತನಿಖೆಯ ಬಳಿಕ ಅದೊಂದು ಕೊಲೆ ಎಂದು ಸ್ಪಷ್ಟ ಪಡಿಸಿದ್ದಾರೆ.
ಆರೋಪಿಗೆ ಬೇರೆ ಬೇರೆ ಕಡೆಗಳಲ್ಲಿ ಅಕ್ರಮ ಸಂಬಂಧಗಳಿದ್ದು ಇದೇ ವಿಚಾರವಾಗಿ ಮೃತ ಮಹಿಳೆ ಜಗಳ ನಡೆಸುತ್ತಿದ್ದಳು. ಘಟನೆ ನಡೆದ ದಿನವೂ ಜಗಳ ನಡೆದಿದ್ದು, ಇದರಿಂದ ಕೋಪಗೊಂಡ ರಾಹುಲ್ ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ. ಈ ವೇಳೆ ಆಕೆಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಿದ ಬಳಿಕ ಆಕೆ ಮೃತಪಟ್ಟಿದ್ದಾಳೆ.
ಇಂತಹುದೆ ಪ್ರಕರಣ ಕೆಲ ವರ್ಷಗಳ ಹಿಂದೆ ಮಂಗಳೂರಿನ ಮಾರಿಪಳ್ಳದಲ್ಲಿ ನಡೆದಿದ್ದು, ಪತ್ನಿಗೆ ಹಲ್ಲೆ ನಡೆಸಿದ ಪತಿ,ಆಕೆ ನೆಲಕ್ಕೇ ಬಿದ್ದಾಗ ತಲೆಗೆ ಹೊಡೆದು ಬಳಿಕ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಗಾಯಗಳಾಗಿವೆ ಎಂದು ಆಸ್ಪತ್ರೆಗೆ ದಾಖಲಿಸಿದ್ದ. ಆದರೆ ಮಹಿಳೆ ಆಸ್ಪತ್ರೆಯಲ್ಲಿ ಮೃತಪಟ್ಟ ಬಳಿಕ ಪೊಲೀಸರು ತನಿಖೆ ನಡೆಸಿದಾಗ ಮನೆಯಲ್ಲಿದ್ದ ಪುಟ್ಟ ಬಾಲಕನಿಂದ ಸತ್ಯ ವಿಚಾರ ಬಯಲಾಗಿ ಆಕಸ್ಮಿಕ ಸಾವೆಂದು ಪರಿಗಣಿಸಿದ್ದ ಪ್ರಕರಣ ಕೊಲೆಯೆಂದು ಬಹಿರಂಗವಾಗಿ ಆರೋಪಿಗೆ ಶಿಕ್ಷೆಯಾಗಿತ್ತು.
