ಬಿಸಿಲು ಮತ್ತು ಮಳೆ ಜೊತೆಯಾಗಿ ಬಂದಾಗ ಆಕಾಶದಲ್ಲಿ ಕಾಮನಬಿಲ್ಲು ಮೂಡುತ್ತದೆ. ಆಕಾಶಕ್ಕೆ ಒಂದು ಹೊಸ ರಂಗು ತಂದುಕೊಡುತ್ತದೆ. ಹೀಗಿರುವಾಗ ಇದ್ದಕ್ಕಿದ್ದಂತೆ ಆಕಾಶದ ಬಣ್ಣವೇ ಬದಲಾದರೆ ಹೇಗಿರಬೇಡ. ಹೌದು. ಇತ್ತೀಚಿಗೆ ಸ್ಕಾಟ್ಲೆಂಡ್ನ ಅನೇಕ ಪ್ರದೇಶಗಳಲ್ಲಿ ಇದ್ದಕ್ಕಿದ್ದಂತೆ ಆಕಾಶದ ಬಣ್ಣ ಬದಲಾಗಿ ಆಕಾಶ ಅದ್ಭುತವಾಗಿ ಕಂಡಿದೆ. ಅರೋರಾ ಬೋರಿಯಾಲಿಸ್ ನ ಈ ದೃಶ್ಯ ಆಕಾಶವನ್ನು ಬೆಳಗಿಸಿದ್ದು, ನೋಡುಗರನ್ನು ಮಂತ್ರಮುಗ್ಧಗೊಳಿಸಿದೆ. ಈ ದೃಶ್ಯಗಳು ಇದೀಗ ಸಾಕಷ್ಟು ವೈರಲ್ ಆಗಿವೆ.
ವರದಿಯ ಪ್ರಕಾರ, ಅರೋರಾವು ಸೂರ್ಯನ ಭೂಕಾಂತೀಯ ಬಿರುಗಾಳಿಗಳಿಂದ ಉಂಟಾಗುವ ನೈಸರ್ಗಿಕ ವಿದ್ಯಮಾನವಾಗಿದೆ ಮತ್ತು ಇದು ಆಕಾಶದಲ್ಲಿ ಬೆಳಕಿನ ಕಿರಣಗಳಾಗಿ ಹೊರಹೊಮ್ಮಿ ಮಿನುಗುತ್ತದೆ. ಇದು ಸಂಭವಿಸಿದಾಗ ನೀವು ಆಕಾಶವನ್ನು ನೋಡಿದರೆ, ಯಾರೋ ಡ್ಯಾನ್ಸಿಂಗ್ ಫ್ಲೋರ್ ಮೇಲಿನ ದೀಪಗಳನ್ನು ಬೆಳಗುತ್ತಿದ್ದಾರೆ ಏನೋ ಎಂಬಂತೆ ಭಾಸವಾಗುತ್ತದೆ.
ಕಳೆದ ಭಾನುವಾರ, ಕಿನ್ರಾಸ್ನಿಂದ ಔಟರ್ ಹೆಬ್ರೈಡ್ಸ್ವರೆಗಿನ ಹೊಸ ಫೋಟೋಗಳು ರಾತ್ರಿ ಹೊತ್ತಿನ ಆಗಸದ ಅದ್ಭುತ ಹಸಿರು ಮತ್ತು ಗುಲಾಬಿ ಬೆಳಕಿನ ಮಿನುಗನ್ನು ಬಹಿರಂಗಗೊಳಿಸಿವೆ. ಹವಾಮಾನ ಇಲಾಖೆಯ ಪ್ರಕಾರ, ಕರೋನಲ್ ಮಾಸ್ ಎಜೆಕ್ಷನ್, ಸೂರ್ಯನ ಹೊರಗಿನ ಪದರದಿಂದ ಪ್ಲಾಸ್ಮಾವನ್ನು ಬೃಹತ್ ಪ್ರಮಾಣದಲ್ಲಿ ಹೊರಹಾಕುವುದು ಇದಕ್ಕೆ ಕಾರಣ ಎಂದಿದೆ. ಏತನ್ಮಧ್ಯೆ, ಇದನ್ನು ಗಮನಿಸಿರುವ ಟ್ವಿಟರ್ ಬಳಕೆದಾರರು, ನಾರ್ದನ್ ಲೈಟ್ಸ್ ನ ಅದ್ಭುತ ಚಿತ್ರಗಳನ್ನು ತಮ್ಮ ತಮ್ಮ ಖಾತೆಗಳಲ್ಲಿ ಹಂಚಿಕೊಂಡಿದ್ದು, ಚಿತ್ರಗಳು ಭಾರಿ ವೈರಲ್ ಆಗುತ್ತಿವೆ.
ಈ ನೋಟವನ್ನು ಅರೋರಾ ಬೋರಿಯಾಲಿಸ್ ಎಂದು ಕರೆಯುತ್ತಾರೆ. ಇದರ ಕುರಿತು ಮಾಹಿತಿ ನೀಡಿರುವ ಖಗೋಳ ಶಾಸ್ತ್ರಜ್ಞ ಸ್ಟೀವ್ ಓವೆನ್ಸ್, ಅರೋರಾವನ್ನು ನೋಡಲು ಯುಕೆ ಅತ್ಯುತ್ತಮ ಸ್ಥಳವಾಗಿದ್ದು, ಭೂಮಿಯ ಉತ್ತರದಲ್ಲಿ ಸಂಭವಿಸುವ ಈ ನಾರ್ದನ್ ಲೈಟ್ಸ್ ಅನ್ನು ಅಧಿಕೃತವಾಗಿ ಬೋರಿಯಾಲಿಸ್ ಎಂದು ಕರೆಯಲಾಗುತ್ತದೆ. ಆದರೆ, ದಕ್ಷಿಣದಲ್ಲಿ ಇವುಗಳನ್ನು ಅರೋರಾ ಆಸ್ಟ್ರೇಲಿಸ್ ಎಂದು ಕರೆಯಲಾಗುತ್ತದೆ ಎಂದು ಹೇಳಿದ್ದಾರೆ.
