ಪೊಲೀಸರೆಂದರೆ ಕಟುಕರು, ಕಲ್ಲು ಮನಸ್ಸಿನವರು ಎಂಬುದೇ ಹಲವರ ಭಾವನೆ. ಆದರೆ ಆರಕ್ಷಕರಲ್ಲೂ ಮಾನವೀಯ ಗುಣ ಜೀವಂತವಾಗಿ ಇದೆ ಎಂಬುದನ್ನು ಸಾರಿ ಹೇಳುತ್ತದೆ ಈ ಘಟನೆ. ಈ ಹಿಂದೆ ನಿರ್ಗತಿಕರೊಬ್ಬರಿಗೆ ಪೊಲೀಸ್ ಪೇದೆಯೊಬ್ಬರು ಊಟ ತಿನ್ನಿಸುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು. ಅಲ್ಲದೆ ಆ ಪೇದೆಗೆ ಸಾಕಷ್ಟು ಮೆಚ್ಚುಗೆ ಕೂಡ ವ್ಯಕ್ತವಾಗಿತ್ತು. ಇದೀಗ ಅಂಥದ್ದೇ ಮತ್ತೊಂದು ಘಟನೆ ಕೇರಳದಲ್ಲಿ ನಡೆದಿದೆ.
ಟ್ರಾಫಿಕ್ ಪೊಲೀಸ್ ಆಫೀಸರ್ ಶೈಜು ಎಂಬವರು ನಿರ್ಗತಿಕನಿಗೊಬ್ಬನಿಗೆ ಸ್ನಾನ ಮಾಡಿಸಿದ್ದಾರೆ. ಇದರ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಅಲ್ಲದೆ ಪೊಲೀಸ್ ಆಫೀಸರ್ ನ ಮಾನವೀಯ ಕಾರ್ಯಕ್ಕೆ ಜನ ಶಹಬ್ಬಾಸ್ ಎಂದಿದ್ದಾರೆ.
ಪೂವಾರ್ ಮೂಲದ ಶೈಜು ಕರ್ತವ್ಯದಲ್ಲಿದ್ದಾಗಲೇ ಈ ಘನ ಕಾರ್ಯ ಮಾಡಿ ಇದೀಗ ಸುದ್ದಿಯಾಗಿದ್ದಾರೆ. ಶೈಜು ಅವರು ಡ್ಯೂಟಿಯಲ್ಲಿದ್ದ ಸಂದರ್ಭದಲ್ಲಿ ವೃದ್ಧನೊಬ್ಬ ಬಂದು ಸೋಪ್ ತೆಗೆದುಕೊಳ್ಳಲು ಹಣ ನೀಡುವಂತೆ ಕೇಳಿದ್ದಾನೆ. ಈ ವೇಳೆ ವೃದ್ಧನಿಗೆ ಹಣ ನೀಡುವ ಬದಲು ಹತ್ತಿರದಲ್ಲೇ ಇದ್ದ ಟ್ಯಾಪ್ ನಲ್ಲಿ ಆತನ ಸ್ನಾನಕ್ಕೆ ಕೂಡ ಸಹಾಯ ಮಾಡಿದ್ದಾರೆ.
ತಾವೇ ಸ್ವತಃ ಸೋಪ್ ಖರೀದಿಸಿ ತೆಗೆದುಕೊಂಡು ಬಂದು ವೃದ್ಧನಿಗೆ ಸ್ನಾನ ಮಾಡಿಸಿದ್ದಾರೆ. ಇಷ್ಟು ಮಾತ್ರವಲ್ಲದೇ ಸ್ನಾನ ಆದ ಬಳಿಕ ವೃದ್ಧನಿಗೆ ಹೊಸ ಬಟ್ಟೆ ಕೊಡಿಸಿದ್ದಾರೆ. ಪೊಲೀಸ್ ಆಫೀಸರ್ ಅವರ ಈ ಮಹಾನ್ ಕಾರ್ಯ ಗುರುತಿಸಿದ ನೆಯ್ಯಟ್ಟಿಂಕರ ಯೂತ್ ಕಮಿಟಿಯವರು ಅವರಿಗೆ ಸನ್ಮಾನ ಕೂಡ ಮಾಡಿದ್ದಾರೆ.
