ಮಂಗಳೂರು : ಓವರ್ ಟೇಕ್ ಮಾಡುವ ಧಾವಂತದಲ್ಲಿ ಬೈಕ್ ಸವಾರನೊಬ್ಬ ಆಯತಪ್ಪಿ ರಸ್ತೆಗೆ ಬಿದ್ದಿದ್ದು ಆತನ ಮೇಲಿನಿಂದಲೇ ಟ್ಯಾಂಕರ್ ಹರಿದು ಯುವಕ ಸ್ಥಳದಲ್ಲೇ ಮೃತನಾ ಘಟನೆ ನಗರದ ನಂತೂರಿನಲ್ಲಿ ನಡೆದಿದೆ.
ಕೇರಳದ ಕೊಟ್ಟಾಯಂ ಜಿಲ್ಲೆಯ ನಿವಾಸಿ ಸೆಬಾಲ್ಟನ್ ಜಾನ್(21) ಎಂಬಾತನೇ ಮೃತ ಯುವಕ. ಜಾನ್ ಬೈಕಿನಲ್ಲಿ ನಂತೂರು ಸರ್ಕಲ್ ದಾಟಿ ಮುಂದೆ ಹೋಗುತ್ತಿದ್ದಾಗ ಬುಲೆಟ್ ಬೈಕನ್ನು ಓವರ್ ಟೇಕ್ ಮಾಡಲು ಹೋಗಿದ್ದಾನೆ. ಎರಡು ಬೈಕುಗಳ ಧಾವಂತದಲ್ಲಿ ಜಾನ್ ಚಲಾಯಿಸುತ್ತಿದ್ದ ಪಲ್ಸರ್ ಬೈಕ್ ಬುಲೆಟ್ ಬೈಕಿಗೆ ತಾಗಿ ನೆಲಕ್ಕುರುಳಿದ್ದು ಅದರಲ್ಲಿದ್ದ ಜಾನ್ ರಸ್ತೆಗೆ ಬೀಳುತ್ತಲೇ ಪಕ್ಕದಲ್ಲಿ ಸಾಗುತ್ತಿದ್ದ ಟ್ಯಾಂಕರ್ ಆತನ ಮೇಲೆ ಹರಿದು ಹೋಗಿದೆ.
ಎರಡೂ ಬೈಕುಗಳು ನೆಲಕ್ಕೆ ಬಿದ್ದಿದ್ದು ಬುಲೆಟ್ ಬೈಕ್ ಸವಾರನಿಗೂ ರಸ್ತೆಗೆ ಬಿದ್ದು ಗಾಯಗಳುಂಟಾಗಿವೆ.. ಆದರೆ ಆತ ಹೆಲ್ಮೆಟ್ ಹಾಕಿದ್ದರಿಂದ ಹೆಚ್ಚೇನೂ ಅಪಾಯ ಉಂಟಾಗಿಲ್ಲ. ಪಲ್ಸರ್ ಬೈಕಿನಲ್ಲಿದ್ದವರು ಹೆಲ್ಮೆಟ್ ಹಾಕ್ಕೊಂಡಿರಲಿಲ್ಲ. ಜಾನ್ ತನ್ನ ಹೆಲ್ಮೆಟ್ಟನ್ನು ಕೈಗೆ ಸಿಕ್ಕಿಸಿಕೊಂಡಿದ್ದ. ರಸ್ತೆಗೆ ಬಿದ್ದ ಯುವಕನ ತಲೆಯ ಭಾಗದಿಂದಲೇ ಟ್ಯಾಂಕರ್ ಲಾರಿಯ ಮುಂದಿನ ಚಕ್ರ ಹರಿದಿದೆ ಎಂದು ಕದ್ರಿ ಟ್ರಾಫಿಕ್ ಪೊಲೀಸರು ತಿಳಿಸಿದ್ದಾರೆ.
ಜಾನ್ ಹಿಂಬದಿ ಕುಳಿತುಕೊಂಡಿದ್ದ ಸಹ ಸವಾರ ಅಂಥೋನಿ ಎಂಬಾತನಿಗೂ ಅಪಘಾತದಲ್ಲಿ ಗಾಯಗೊಂಡಿದ್ದಾನೆ.ಈ ಘಟನೆ ಶುಕ್ರವಾರ ಸಂಜೆ ನಾಲ್ಕು ಗಂಟೆ ಸುಮಾರಿಗೆ ಘಟನೆ ನಡೆದಿದ್ದು ಏಕಮುಖದ ರಸ್ತೆಯಲ್ಲಿ ಎರಡು ಬೈಕುಗಳ ಅತಿವೇಗದ ಚಾಲನೆಯಿಂದಲೇ ಅಪಘಾತ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
