ಯಾವ ತಂದೆತಾಯಿ ತಾನೇ ತನ್ನ ಮಕ್ಕಳು ಒಳ್ಳೆಯ ಜೀವನ ಸಂಗಾತಿ ಪಡೆದುಕೊಂಡು ನೂರ್ಕಾಲ ಚೆನ್ನಾಗಿರಲಿ ಎಂದು ಬಯಸುವುದಿಲ್ಲ ಹೇಳಿ ? ಹಾಗೆನೇ ಇಲ್ಲೊಬ್ಬಾಕೆಯ ಅಪ್ಪ ಕೂಡ ಆಕೆಗಾಗಿ ಒಳ್ಳೆಯ ಹುಡುಗನನ್ನು ತೂಗಿ ಅಳೆದು ಹುಡುಕಿದ್ದಾರೆ. ಮ್ಯಾಟ್ರಿಮೋನಿಯಲ್ ಸೈಟ್ ನಿಂದ ಹುಡುಗನ ಪ್ರೊಫೈಲನ್ನು ಮಗಳಿಗೆ ಕಳುಹಿಸಿದ್ದರು. ಆದರೆ, ಮಗಳು ಆ ಪ್ರೊಫೈಲ್ ನ್ನು ಬಳಸಿಕೊಂಡು ಮಾಡಿಕೊಂಡ ಕೆಲಸವೊಂದು ಸಾಮಾಜಿಕ ಜಾಲತಾಣದಲ್ಲಿ ಹಾಸ್ಯಕ್ಕೆ ಕಾರಣವಾಗಿದೆ.
ಫಿನ್‌ಟೆಕ್ ಸಂಸ್ಥೆಯ ಬೆಂಗಳೂರು ಮೂಲದ ಸಾಲ್ಟ್ ಸ್ಟಾರ್ಟಪ್‌ನ ಸಹ ಸಂಸ್ಥಾಪಕಿ ಉದಿತಾ ಪಾಲ್, ತಮ್ಮ ತಂದೆ ಪಾಲ್ ಕಳುಹಿಸಿದ್ದ ಪ್ರೊಫೈಲ್‌ನ ವರನನ್ನು ತಮ್ಮ ಕಂಪನಿಯ ನೌಕರನಾಗಿ ನೇಮಿಸಿಕೊಳ್ಳಲು ಬಯಸಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ.
ಮಗಳು ಈ ರೀತಿ ಮಾಡಿದ ನಂತರ ಆಕೆ ತನ್ನ ತಂದೆಯ ರಿಯ್ಯಾಕ್ಷನ್ ಹೇಗಿದೆ ಎಂದು ಕೇಳಲು ಉತ್ಸುಕಳಾಗಿದ್ದಳು. ಆದರೆ ತಂದೆಗೆ ಮಗಳು ಮಾಡಿದ ಈ ಕೆಲಸ ಖುಷಿ ಕೊಟ್ಟಿತ್ತೇ ಅಥವಾ ಬೇಸರ ಮೂಡಿಸಿತೇ?
ಅದರ ವಾಟ್ಸ್ ಆ್ಯಪ್ ಚಾಟಿಂಗ್ ಸ್ಕ್ರೀನ್‌ಶಾಟ್ ಅನ್ನೂ ಉದಿತಾ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.
‘ನಾವೀಗ ಮಾತನಾಡಬಹುದೇ? ತುರ್ತು.. ಎಂದು ಕೇಳಿರುವ ತಂದೆ. ನೀನೇನು ಮಾಡಿರುವೆ ಎಂದು ನಿನಗೆ ಗೊತ್ತೇ? ಮ್ಯಾಟ್ರಿಮೋನಿಯಲ್ ತಾಣಗಳಿಂದ ನೀನು ಜನರನ್ನು ಕೆಲಸಕ್ಕೆ ತೆಗೆದುಕೊಳ್ಳಬಾರದು. ಅವರ ತಂದೆಗೆ ನಾನು ಏನು ಹೇಳಲಿ’ ಎಂದು ತಂದೆ ಪ್ರಶ್ನೆ ಮಾಡಿ ಬೇಸರ ವ್ಯಕ್ತಪಡಿಸಿದ್ದಾರೆ.
‘ನೀನು ವರನಿಗೆ ಕಳುಹಿಸಿದ್ದ ಮೆಸೇಜ್ ಅನ್ನು ನಾನು ನೋಡಿದೆ. ಅವರಿಗೆ ಸಂದರ್ಶನದ ಲಿಂಕ್ ಕಳುಹಿಸಿ, ರೆಸ್ಯೂಮ್ ಕಳುಹಿಸಲು ಹೇಳಿರುವೆ?’ ಎಂದು ಅಸಮಾಧಾನ ಹೊರ ಹಾಕಿದ್ದಾರೆ. ಅಂತಿಮವಾಗಿ, ತಂದೆಯ ಪ್ರಶ್ನೆಗೆ ಉತ್ತರಿಸಿರುವ ಉದಿತಾ, ನನ್ನನ್ನು ಕ್ಷಮಿಸಿ.. ಎಂಬ ಮಾತನ್ನೂ ಹೇಳಿದ್ದಾಳೆ.
ಈ ಇಡೀ ಪ್ರಸಂಗ, ಕೆಲವರಿಗೆ ಹಾಸ್ಯ ಹಾಗೂ ಗಂಭೀರತೆಯನ್ನು ಮೂಡಿಸುವುದರಲ್ಲಿ ಎರಡು ಮಾತಿಲ್ಲ. ಆದರೂ ಈಕೆ ಮಾಡಿದ್ದು ಪೋಷಕರಿಗೆ ಸಮಾಧಾನ ತಂದಂತೆ ಕಂಡಿಲ್ಲ.
