ಬಂಟ್ವಾಳ : ಕಾರನ್ನು ವೇಗವಾಗಿ ಅಡ್ಡಾದಿಡ್ಡಿಯಾಗಿ ಚಲಾಯಿಸಿದ ಕಾರ ಕಾರಿನಲ್ಲಿದ್ದ ಮಹಿಳೆಯರು ಹೆದರಿ, ಕಿರುಚಾಡಿದ್ದನ್ನು ಸಾರ್ವಜನಿಕರು ಅಪಹರಣವೆಂದು ತಿಳಿದು ಅಡ್ಡಗಟ್ಟಿ ನಂತರ ಪೊಲೀಸರಿಗೆ ಮಾಹಿತಿ ನೀಡಿದ ಘಟನೆ ಸಾಲೆತ್ತೂರಿನಲ್ಲಿ ನಡೆದಿದೆ.
ಮಂಗಳೂರು ಹೊರ ವಲಯದ ತೊಕ್ಕೊಟ್ಟು ಪಿಲಾರಿನ ಮಹಿಳೆಯರು ಪಣೋಲಿಬೈಲಿಗೆ ತೆರಳುವ ಹಿನ್ನೆಲೆ ಕದ್ರಿಯಿಂದ ಬಾಡಿಗೆ ಕಾರಿನಲ್ಲಿ ಬಂದಿದ್ದರು ಎನ್ನಲಾಗಿದೆ.
ಈ ವೇಳೆ ಕಾರು ಚಾಲಕ ಕಾಡುಮಠ ನಿವಾಸಿ ಸಾಗರ್(26) ಎಂಬಾತ ಕಾರನ್ನು ವೇಗವಾಗಿ ಅಡ್ಡಾದಿಡ್ಡಿಯಾಗಿ ಓಡಿಸಿದ್ದು, ಇದರಿಂದ ಗಾಬರಿಗೊಂಡ ಮಹಿಳೆಯರು ನೆರವಿಗಾಗಿ ಬೊಬ್ಬೆ ಹೊಡೆಯುತ್ತಿದ್ದ ವೇಳೆ ಸಾರ್ವಜನಿಕರು ಅಪಹರಣವೆಂದು ತಿಳಿದು ಕಾರನ್ನು ತಡೆದು ನಿಲ್ಲಿಸಿದ್ದಾರೆ ನಂತರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ತಕ್ಷಣವೇ ಮಾಹಿತಿ ಪಡೆದು ಸ್ಥಳಕ್ಕಾಗಮಿಸಿದ ವಿಟ್ಲ ಪೊಲೀಸರ ತಂಡ ಸಾರ್ವಜನಿಕರ ವಶದಲ್ಲಿದ್ದ ಚಾಲಕ ಕಾಡುಮಠ ಕಾಲೋನಿ ನಿವಾಸಿ ಸಾಗರ್ (26) ಮತ್ತು ಆತನ ಕಾರನ್ನು ವಶಕ್ಕೆ ಪಡೆದರು. ಆದ್ರೆ ಮಹಿಳಾ ಪ್ರಯಾಣಿಕರು ಯಾವುದೇ ದೂರನ್ನು ನೀಡದ ಹಿನ್ನೆಲೆ ಆತನ ವಿರುದ್ಧ ಪ್ರಕರಣ ದಾಖಲಾಗಿಲ್ಲ. ಪೊಲೀಸರು ಅವನನ್ನು ಬಿಟ್ಟು ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ.
