Home » “ಬಜಾಜ್ ಫೈನಾನ್ಸ್” ನಿಂದ ಗ್ರಾಹಕರ ಹೆಸರಿನಲ್ಲಿ ಸುಳ್ಳು ಸಾಲ ಸೃಷ್ಟಿ, ಭಾರೀ ದಂಡ ವಿಧಿಸಿದ ರಾಜ್ಯ ಗ್ರಾಹಕರ ಆಯೋಗ !!!

“ಬಜಾಜ್ ಫೈನಾನ್ಸ್” ನಿಂದ ಗ್ರಾಹಕರ ಹೆಸರಿನಲ್ಲಿ ಸುಳ್ಳು ಸಾಲ ಸೃಷ್ಟಿ, ಭಾರೀ ದಂಡ ವಿಧಿಸಿದ ರಾಜ್ಯ ಗ್ರಾಹಕರ ಆಯೋಗ !!!

0 comments

ಬಜಾಜ್ ಫೈನಾನ್ಸ್ ಸಂಸ್ಥೆಯು ಸುಳ್ಳು ಸಾಲ ಸೃಷ್ಟಿಸಿ, ಗ್ರಾಹಕರ ಬ್ಯಾಂಕ್ ಖಾತೆಯಿಂದ ಹಣ ಕಡಿತ ಮಾಡಿಕೊಳ್ಳುತ್ತಿದ್ದ ಪ್ರಕರಣದಲ್ಲಿ ರಾಜ್ಯ ಗ್ರಾಹಕರ ಆಯೋಗ ಬಜಾಜ್ ಫೈನಾನ್ಸ್ ಹಾಗೂ ಟಿವಿ ಏಜೆನ್ಸಿ ವಿರುದ್ಧ ಮಹತ್ವದ ತೀರ್ಪು ನೀಡಿದೆ.

ಈ ಪ್ರಕರಣದಲ್ಲಿ ಗ್ರಾಹಕರಿಗೆ ರೂ. 50 ಸಾವಿರ ಪರಿಹಾರ ಹಾಗೂ ರೂ. 10 ಸಾವಿರ ದಾವೆಯ ಖರ್ಚು ನೀಡುವಂತೆ ನ್ಯಾಯಪೀಠ, ಬಜಾಜ್ ಫೈನಾನ್ಸ್ ಮತ್ತು ಟಿವಿ ಏಜೆನ್ಸಿಗೆ ನಿರ್ದೇಶನ ನೀಡಿದೆ.

ಗ್ರಾಹಕರಾದ ಮೀನಾಕ್ಷಿ ಎಂಬುವರು 2017ರ ಜೂನ್ ತಿಂಗಳಿನಲ್ಲಿ ಹರಿಹರದ ಆಸ್ರ ಟಿವಿ ಏಜೆನ್ಸಿಯಿಂದ ಬಜಾಜ್ ಫೈನಾನ್ಸ್ ಸಾಲ ಸೌಲಭ್ಯದಡಿ ಯುಪಿಎಸ್ ಖರೀದಿಸಿದ್ದರು. ಸಾಲದ ತಿಂಗಳ ಕಂತು ಅವರ ಕೆನರಾ ಬ್ಯಾಂಕ್ ಖಾತೆಯಿಂದ ECS ಮೂಲಕ ಕಡಿತವಾಗುತ್ತಿತ್ತು.
ಇದರ ಜೊತೆಗೆ, ಅವರು ಸಾಲ ಮಾಡದೇ ಇರುವ ಮತ್ತೊಂದು ಸಾಲದ ಖಾತೆಗೂ ಹಣ ಕಡಿತಗೊಳ್ಳುತ್ತಿತ್ತು. ಕೂಡಲೇ ಗಾಬರಿಗೊಂಡ ಗ್ರಾಹಕರು, ಸಾಲ ಪಡೆಯದ ಕಾರಣ, ಖಾತೆಯಿಂದ ಹಣ ಕಡಿತ ಮಾಡಬಾರದು ಎಂದು ಬ್ಯಾಂಕಿಗೆ ಮನವಿ ಮಾಡಿದರು.

‘ಇದು ಮುಂಬೈ ಕೇಂದ್ರ ಕಚೇರಿಯಿಂದ ನಡೆಯುವ ಪ್ರಕ್ರಿಯೆ. ನಾವು ನಿಲ್ಲಿಸಲಾಗದು’ ಎಂದು ಬ್ಯಾಂಕ್ ಅಧಿಕಾರಿಗಳು ತಿಳಿಸಿದ್ದರು. ಬಳಿಕ ಪರಿಶೀಲಿಸಿದಾಗ ಬಜಾಜ್ ಫೈನಾನ್ಸ್ ಸ್ಥಳೀಯ ಸಿಬ್ಬಂದಿ ಮತ್ತು ಇತರರು ಶಾಮೀಲಾಗಿ ಮೀನಾಕ್ಷಿ ಹೆಸರಿನಲ್ಲಿ ರೂ. 73000/-ದ ನಕಲಿ ಸಾಲ ಸೃಷ್ಟಿಸಿ, ಅದರ ಕಂತಿಗಾಗಿ ಹಣ ಜಮಾ ಮಾಡುತ್ತಿರುವ ವಿಷಯ ಬಯಲಿಗೆ ಬಂತು.

2019ರ ಮಾರ್ಚ್ 22ರಂದು ಇದರ ವಿರುದ್ಧ ಗ್ರಾಹಕಿ ಮೀನಾಕ್ಷಿ ದಾವಣಗೆರೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದೂರು ಸಲ್ಲಿಸಿದ್ದರು. ಹಾಗೂ ವಿಚಾರಣೆ ವೇಳೆ, ಬಜಾಜ್ ಫೈನಾನ್ಸ್ ತನ್ನ ಸಿಬ್ಬಂದಿ ಗ್ರಾಹಕರ ಹೆಸರಿನಲ್ಲಿ ಫೇಕ್ ಅಕೌಂಟ್ ಸೃಷ್ಟಿಸಿರುವುದನ್ನು ಒಪ್ಪಿಕೊಂಡಿತ್ತು. ಹೀಗಾಗಿ ಮೀನಾಕ್ಷಿ ಅವರಿಗೆ ನಕಲಿ ಸಾಲಕ್ಕೆ ಕಡಿತವಾದ ರೂ. 15 ಸಾವಿರ, ಪರಿಹಾರವಾಗಿ 13 ಸಾವಿರ ಹಾಗೂ ರೂ. 3 ಸಾವಿರ ದಾವೆಯ ಖರ್ಚನ್ನು 30 ದಿನದೊಳಗೆ ನೀಡುವಂತೆ ಜಿಲ್ಲಾ ಗ್ರಾಹಕರ ಆಯೋಗ 2021ರ ಆಗಸ್ಟ್ 16ರಂದು ಆದೇಶ ನೀಡಿತ್ತು.

ಇದಕ್ಕೆ ವ್ಯತಿರಿಕ್ತವಾಗಿ ಆಯೋಗದ ಮಹಿಳಾ ಸದಸ್ಯೆ ಜ್ಯೋತಿ ರಾಧೇಶ್ ‘ಪ್ರತಿವಾದಿಗಳಿಂದ ಸೇವಾ ನ್ಯೂನತೆ’ ಆಗಿಲ್ಲ ಎಂದು ದೂರು ತಿರಸ್ಕರಿಸಿ ಪ್ರತ್ಯೇಕ ಆದೇಶ ಹೊರಡಿಸಿದರು. ದಾವಣಗೆರೆ ಜಿಲ್ಲಾ ಗ್ರಾಹಕರ ಆಯೋಗದ ಆದೇಶ ಪ್ರಶ್ನಿಸಿ, ಪ್ರತಿವಾದಿ ಟಿವಿ ಏಜೆನ್ಸಿ ರಾಜ್ಯ ಗ್ರಾಹಕರ ಆಯೋಗಕ್ಕೆ ಮೇಲ್ಮನವಿ ಸಲ್ಲಿಸಿತು. ಇದರ ವಿಚಾರಣೆ ನಡೆಸಿದ ಆಯೋಗ, ಪರಿಹಾರ ಮೊತ್ತವನ್ನು ರೂ. 50000/-ಕ್ಕೆ ಹೆಚ್ಚಿಸಿದೆ. ಅಲ್ಲದೆ ದಾವೆ ಖರ್ಚು ರೂ. 10 ಸಾವಿರ ನೀಡಬೇಕು ಎಂದು ಆದೇಶಿಸಿದೆ.

“ಗ್ರಾಹಕಿಯ ಹೆಸರಿನಲ್ಲಿ ನಕಲಿ ಸಾಲ ಸೃಷ್ಟಿ ಮಾಡಿರುವುದನ್ನು ಸ್ವತಃ ಎದುರುದಾರರೇ ಒಪ್ಪಿಕೊಂಡಿದ್ದಾರೆ. ಆದರೆ, ದೂರು ದಾಖಲಿಸುವ ಮುನ್ನವೇ ನಕಲಿ ಸಾಲ ಮುಕ್ತಾಯ ಮಾಡಿರುವುದರಿಂದ ಸೇವಾ ನ್ಯೂನತೆಯಾಗಿಲ್ಲ ಎಂದು ಪರಿಗಣಿಸಿ ಮಹಿಳಾ ಸದಸ್ಯೆ ದೂರು ವಜಾ ಮಾಡಿರುವುದು ದುರದೃಷ್ಟಕರ” ಎಂದು ನ್ಯಾಯಪೀಠ ಹೇಳಿದೆ.

ಗ್ರಾಹಕರ ಹಿತರಕ್ಷಣಾ ಕಾಯ್ದೆ ಪ್ರಕಾರ, ಈ ರೀತಿ ಪ್ರತ್ಯೇಕ ಆದೇಶ ಮಾಡಲು ಅವಕಾಶವಿಲ್ಲ. ಕಾಯ್ದೆಯ ಸೆಕ್ಷನ್ 14(2ಎ) ಪ್ರಕಾರ ಆಯೋಗದ ಒಬ್ಬ ಸದಸ್ಯರಿಗೆ ಪ್ರಕರಣದ ವಿವಾದದ ಅಂಶದ ಬಗ್ಗೆ ಭಿನ್ನಾಭಿಪ್ರಾಯವಿದ್ದರೆ ಅದನ್ನು ಇತರೆ ಸದಸ್ಯರಿಗೆ ತಿಳಿಸಿ, ಆ ಅಂಶಗಳ ಬಗ್ಗೆ ಪ್ರಕರಣವನ್ನು ಪರಿಶೀಲಿಸುವಂತೆ ನೋಡಿಕೊಳ್ಳಬೇಕು. ಆದರೆ, ಪ್ರತ್ಯೇಕ ಆದೇಶದ ಪ್ರಶ್ನೆಯೇ ಉದ್ಭವಿಸದು’ ಎಂದು ನ್ಯಾಯಪೀಠ ತಿಳಿಸಿದೆ.

‘ಮಹಿಳಾ ಸದಸ್ಯೆ ಹೊರಡಿಸಿರುವ ಪ್ರತ್ಯೇಕ ಆದೇಶ ಕಾನೂನು ಪ್ರಕಾರ ಆದೇಶವೇ ಅಲ್ಲ. ಆ ಆದೇಶಕ್ಕೆ ಕಾನೂನು ಪ್ರಕಾರ ಯಾವುದೇ ಮಾನ್ಯತೆಯಿಲ್ಲ. ಮಹಿಳಾ ಸದಸ್ಯೆ ತಮ್ಮ ವ್ಯಾಪ್ತಿ ಮೀರಿ ಅಧಿಕಾರ ಚಲಾಯಿಸಿದ್ದಾರೆ. ಈ ಕ್ರಮ ಕಾನೂನಿನ ಉಲ್ಲಂಘನೆ. ಹಾಗೂ ನ್ಯಾಯಿಕ ಅಶಿಸ್ತು ಆಗಿದೆ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ವಿಷಾದ ವ್ಯಕ್ತಪಡಿಸಿದೆ.

You may also like

Leave a Comment