Home » ಮಗಳ ಪ್ರೀತಿಗೆ ಹೆತ್ತವರೇ ವಿಲನ್ | ನಡೆದೇಹೋಯ್ತು ಮರ್ಯಾದಾ ಹತ್ಯೆ!!!

ಮಗಳ ಪ್ರೀತಿಗೆ ಹೆತ್ತವರೇ ವಿಲನ್ | ನಡೆದೇಹೋಯ್ತು ಮರ್ಯಾದಾ ಹತ್ಯೆ!!!

0 comments

ಅನ್ಯ ಜಾತಿಯ ಯುವಕನೋರ್ವನನ್ನು ಪ್ರೀತಿಸಿದ್ದಕ್ಕೆ ಯುವತಿಯ ಮನೆಯವರೇ ಯುವತಿಯನ್ನು ಕೊಲೆ ಮಾಡಿದ ಘಟನೆಯೊಂದು ಮೈಸೂರಿನಲ್ಲಿ ನಡೆದಿದೆ.

ಅನ್ಯಜಾತಿಯ ಯುವಕನನ್ನು ಪ್ರೀತಿಸಿದ್ದಕ್ಕೆ ಹೆತ್ತವರೇ ಅಪ್ರಾಪ್ತ ಮಗಳ ಕೊಲೆ ಮಾಡಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಕಗ್ಗುಂಡಿ ಗ್ರಾಮದಲ್ಲಿ ಪೋಷಕರಿಂದಲೇ ಶಾಲಿನಿ(17) ಎಂಬ ಯುವತಿಯ ಹತ್ಯೆ ನಡೆದಿದೆ. ಅಪ್ರಾಪ್ತ ವಯಸ್ಸಿನ ಮಗಳು ಅನ್ಯಜಾತಿಯ ಯುವಕನನ್ನು ಪ್ರೀತಿಸಿದ್ದು, ಸಿಟ್ಟಿಗೆ ಕಾರಣವಾಗಿ ತಂದೆಯೇ ಮಗಳ ಕತ್ತು ಹಿಸುಕಿ ಕೊಂದು ಪೊಲೀಸರಿಗೆ ಶರಣಾಗಿದ್ದಾರೆ. ತಂದೆ ಸುರೇಶ್ ಹಾಗೂ ತಾಯಿ ಬೇಬಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಒಂದೇ ಕಾಲೇಜಿನಲ್ಲಿ ಓದುತ್ತಿದ್ದ ಯುವಕ ಪರಿಶಿಷ್ಟಜಾತಿಗೆ ಸೇರಿದವನಾಗಿದ್ದಾನೆ. ಮಂಜು ಎಂಬಾತನನ್ನೇ ಶಾಲಿನಿ ಪ್ರೀತಿಸುತ್ತಿದ್ದಳು. ಮಂಜು ಹಾಗೂ ಶಾಲಿನಿ ಒಂದೇ ಕಾಲೇಜೊಂದರಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದು, ಕಳೆದ ಮೂರು ವರ್ಷಗಳಿಂದ ಪ್ರೀತಿಯಲ್ಲಿದ್ದರು. ಆದರೆ ಇವರಿಬ್ಬರ ಪ್ರೀತಿಗೆ ಶಾಲಿನಿ ಪೋಷಕರು ವಿರೋಧ ವ್ಯಕ್ತಪಡಿಸಿದ್ದರು. ವಿರೋಧದ ನಡುವೆಯೂ ಮದುವೆಯಾಗಲು ಪ್ರೇಮಿಗಳು ನಿರ್ಧರಿಸಿದ್ದರು. ಪ್ರಿಯಕರನಿಗಾಗಿ ಶಾಲಿನಿ ಮನೆ ಬಿಟ್ಟಿದ್ದಳು. ಇದೇ ವಿಚಾರ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು ಕೂಡಾ. ಅಲ್ಲೂ ಕೂಡಾ ಪೊಲೀಸರ ಮುಂದೆ ಶಾಲಿನಿ ಮನೆಗೆ ಹೋಗುವುದಿಲ್ಲ ಎಂದು ಪಟ್ಟು ಹಿಡಿದಿದ್ದಳು. ಅಲ್ಲದೆ ಆಕೆಗೆ 18 ವರ್ಷ ತುಂಬಿರದ ಕಾರಣ ಪೊಲೀಸರು ಆಕೆಯನ್ನು ಮೈಸೂರಿನ ಬಾಲಮಂದಿರಕ್ಕೆ ಕಳುಹಿಸಿದ್ದರು.

ಕಳೆದ ಕೆಲವು ದಿನಗಳ ಹಿಂದೆ ಶಾಲಿನಿ ತನ್ನ ಪೋಷಕರಿಗೆ ಕರೆ ಮಾಡಿ ಇಲ್ಲಿಂದ ಕರೆದುಕೊಂಡು ಹೋಗುವಂತೆ ಹೇಳಿದಾಗ ಪೋಷಕರು ಒಪ್ಪಿಗೆ ಪತ್ರ ಬರೆದುಕೊಟ್ಟು ತಮ್ಮ ಮಗಳನ್ನು ಸ್ವಗ್ರಾಮಕ್ಕೆ ಕರೆತಂದಿದ್ದರು. ಸೋಮವಾರ ರಾತ್ರಿ ಶಾಲಿನಿ ಮತ್ತೆ ತನ್ನ ಪೋಷಕರೊಂದಿಗೆ ಪ್ರೀತಿಸುತ್ತಿದ್ದ ಹುಡುಗನೊಂದಿಗೆ ಹೋಗುವುದಾಗಿ ಹಠ ಮಾಡಿ ಕುಳಿತಾಗ ಆಕೆಯ ತಂದೆ ಸುರೇಶ್ ಇದಕ್ಕೆ ಒಪ್ಪದೆ ತನ್ನ ಮಗಳ ಕತ್ತು ಹಿಸುಕಿ ಕೊಲೆ ಮಾಡಿ ತನ್ನ ಪತ್ನಿ ಬೇಬಿಯೊಂದಿಗೆ ಸೇರಿ ಆಕೆ ಪ್ರೀತಿಸುತ್ತಿದ್ದ ಹುಡುಗನ ಗ್ರಾಮದ ಜಮೀನೊಂದರ ಬಳಿ ಎಸೆದು ಹೋಗಿದ್ದಾರೆ. ಮಂಗಳವಾರ ಬೆಳಗ್ಗೆ 6.30ರ ಸಮಯದಲ್ಲಿ ಸುರೇಶ್ ಪಿರಿಯಾಪಟ್ಟಣ ಪೊಲೀಸ್ ಠಾಣೆಗೆ ಬಂದು ಮಗಳನ್ನು ಕೊಲೆ ಮಾಡಿರುವುದಾಗಿ ತಪ್ಪೊಪ್ಪಿ ಕೊಂಡು ಪೊಲೀಸರಿಗೆ ಶರಣಾಗಿದ್ದಾರೆ.

You may also like

Leave a Comment