ಮದುವೆಯಾದ ನವವರ ಕೆಲವೇ ಗಂಟೆಗಳಲ್ಲಿ ಸಾವು ಕಂಡಿದ್ದಾನೆ. ಈ ಸಾವು ಮನೆ ಮಂದಿ ಎಲ್ಲರಿಗೂ ಒಂದು ರೀತಿಯ ಶಾಕ್ ನೀಡಿದೆ. ಹೌದು, ಮದುವೆಯಾದ ಕೆಲವೇ ಗಂಟೆಗಳಲ್ಲಿ ನವವಿವಾಹಿತನೋರ್ವ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ
ಆಂಧ್ರಪ್ರದೇಶದ ನಂದ್ಯಾಲ ಜಿಲ್ಲೆಯಲ್ಲಿ ನಡೆದಿದೆ.
ಶಿವಕುಮಾರ್ ಎಂಬಾತನೇ ಮೃತ ನವಿವಾಹಿತನಾಗಿದ್ದಾನೆ.
ಜಿಲ್ಲೆಯ ವೇಲುಗೋಡು ವಲಯದ ಬೋಯರೇವುಳ ಗ್ರಾಮದ ನಿವಾಸಿಯಾದ ಶಿವಕುಮಾರ್ ಶುಕ್ರವಾರ ಜೂಪಾಡುಬಂಗ್ಲಾ ವಲಯದ ಭಾಸ್ಕರಪುರ ಗ್ರಾಮದ ಯುವತಿಯನ್ನು ವಿವಾಹವಾಗಿದ್ದ. ಎಲ್ಲವೂ ಚೆನ್ನಾಗಿಯೇ ಇತ್ತು. ಶನಿವಾರ ಬೆಳಗಿನ ಜಾವ 3 ಗಂಟೆ ಸುಮಾರಿಗೆ ವಾಕಿಂಗ್‌ಗೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಹೋಗಿದ್ದಾನೆ. ಆದರೆ, ಬಹಳಷ್ಟು ಸಮಯವಾದರೂ ಮನೆಗೆ ವಾಪಾಸ್ ಬಂದಿಲ್ಲ. ಹೀಗಾಗಿ ಕುಟುಂಬಸ್ಥರು ಶಿವಕುಮಾರ್‌ಗಾಗಿ ಹುಡುಕಾಟ ಆರಂಭಿಸಿದ್ದಾರೆ. ಈ ವೇಳೆ ಬೋಯರೇವುಳ ಮತ್ತು ಮೋತ್ತೂರು ಗ್ರಾಮಗಳ ನಡುವಿನ ರಸ್ತೆಯಲ್ಲಿ ಶಿವಕುಮಾರ್ ಬಿದ್ದಿರುವುದು ಗೊತ್ತಾಗಿದೆ. ಕೂಡಲೇ ಅತನನ್ನು ಆತ್ಮಕೂರಿನ ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ, ಅಷ್ಟರಲ್ಲಾಗಲೇ ಶಿವಕುಮಾರ್ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.
ಈ ಕುರಿತು ಕುಟುಂಬಸ್ಥರ ದೂರಿನ ಮೇರೆಗೆ ಪೊಲೀಸರು ಅನುಮಾನಾಸ್ಪದ ಸಾವಿನ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಜೊತೆಗೆ ಅಪರಿಚಿತ ವಾಹಾನವೇನಾದರೂ ಡಿಕ್ಕಿಯಾಗಿದೆಯೇ? ಅಥವಾ ಯಾರಾದರೂ ಕೊಲೆ ಮಾಡಿದ್ದಾರಾ ಎಂಬ ನಿಟ್ಟಿನಲ್ಲೂ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಮದುವೆಯಾದ ಕೆಲವೇ ಗಂಟೆಗಳಲ್ಲಿ ಈ ಸಾವು ಸಂಭವಿಸಿದ್ದರಿಂದ ಇಡೀ ಗ್ರಾಮದಲ್ಲಿ ಸೂತಕದ ಛಾಯೆ ಆವರಿಸಿದೆ.
